ಕಾರ್ಕಳ, ಫೆ.13 (DaijiworldNews/MB) : ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ, ಕಾರ್ಕಳವು ಕಾರ್ಮಿಕರ ರಾಜ್ಯ ವಿಮಾ ಯೋಜನೆ (ಇಎಸ್ಐಎಸ್) ಯೊಂದಿಗೆ ದ್ವಿತೀಯ ಹಂತದ ಆರೈಕೆ ಸೇವೆಗಳ ಚಿಕಿತ್ಸೆಗಾಗಿ ಒಡಂಬಡಿಕೆ ಮಾಡಿಕೊಂಡಿದೆ ಎಂದು ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ್ ಬಲ್ಲಾಳ ಅವರು ತಿಳಿಸಿದರು.

ಇನ್ನು ಮುಂದೆ ಇಎಸ್ಐ ಫಲಾನುಭವಿಗಳು ಆಸ್ಪತ್ರೆಯ ಸಾಮಾನ್ಯ ವೈದ್ಯಕೀಯ ವಿಭಾಗ, ಸಾಮಾನ್ಯ ಶಸ್ತ್ರಚಿಕಿತ್ಸೆ ವಿಭಾಗ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ, ಮಕ್ಕಳ ವಿಭಾಗ, ಕಿವಿ ಮೂಗು ಮತ್ತು ಗಂಟಲು ವಿಭಾಗ ಮತ್ತು ನೇತ್ರಶಾಸ್ತ್ರ ವಿಭಾಗಗಳಲ್ಲಿ ಇಎಸ್ಐ ಅಡಿಯಲ್ಲಿ ನಗದುರಹಿತವಾಗಿ ಒಳರೋಗಿ ಚಿಕಿತ್ಸೆಯನ್ನು ಪಡೆಯಬಹುದು. ಇಎಸ್ಐ ಫಲಾನುಭವಿಗಳು, ತಮ್ಮ ಸಂಬಂಧಿತ ಇಎಸ್ಐ ಡಿಸ್ಪೆನ್ಸರಿಯಿಂದ ಉಲ್ಲೇಖದ ಪತ್ರ ತರುವುದರ ಮೂಲಕ ಈ ಸೌಲಭ್ಯವನ್ನು ಪಡೆಯಬಹುದು. ಕಾರ್ಕಳದ ಶಾಸಕರಾದ ಶ್ರೀ ಸುನಿಲ್ ಕುಮಾರ್ ಅವರ ಸತತ ಪ್ರಯತ್ನದಿಂದಾಗಿ ಕಾರ್ಕಳದ ಡಾ ಟಿ ಎಂ ಎ ಪೈ ಆಸ್ಪತ್ರೆಯಲ್ಲಿ ಈ ಒಡಂಬಡಿಕೆ ಸಾಧ್ಯವಾಹಿತು ಎಂದು ಈ ಸಂದರ್ಭದಲ್ಲಿ ಹೇಳಿದರು.
ಇಎಸ್ಐ ಫಲಾನುಭವಿಗಳು ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಡಾ.ಕೀರ್ತಿನಾಥ್ ಬಲ್ಲಾಳ ತಿಳಿಸಿದ್ದಾರೆ.