ನಾಟಿಂಗ್ ಹ್ಯಾಮ್, ಜುಲೈ 13: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ರೋಹಿತ್ ಶರ್ಮಾ ಅವರ ಭರ್ಜರಿ ಶತಕದ ನೆರವಿನಿಂದ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ 49.5 ಓವರ್ ಗಳಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದು 268ರನ್ ಪೇರಿಸಿತು. 269 ರನ್ ಗಳ ಗುರಿ ಬೆನ್ನಟ್ಟಿದ ಟೀಂಇಂಡಿಯಾ 40.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 269 ರನ್ ಪೇರಿಸಿ ಗೆಲುವಿನ ನಗೆ ಚೆಲ್ಲಿತು. ಭಾರತದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ೧೧೪ ಎಸೆತಗಳಲ್ಲಿ ಅಜೇಯ 137 ರನ್ ಸಿಡಿಸಿ ಭಾರತದ ಗೆಲುವಿನ ಹಾದಿ ಸುಗಮಗೊಳಿಸಿದರು. ಇವರೊಂದಿಗೆ ಶಿಖರ್ ಧವನ್ 40 (27), ವಿರಾಟ್ ಕೊಹ್ಲಿ 75 (82), ಕೆಎಲ್ ರಾಹುಲ್ ಅಜೇಯ 9 (18) ರನ್ ಪೇರಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದರು. ಇಂಗ್ಲೆಂಡ್ ಪರ ಜೇಸನ್ ರಾಯ್ 38 (35), ಬಿರ್ಸ್ಟೋವ್ 35 (38), ಬೆನ್ ಸ್ಟೋಕ್ಸ್ 50 (103), ಜೋಸ್ ಬಟ್ಲರ್ 53 (51), ಮೋಯೀನ್ ಆಲಿ 24 (23) ರನ್ ಗಳಿಸಿದ್ದು ಎದುರಾಳಿ ಭಾರತಕ್ಕೆ ತಕ್ಕ ಮಟ್ಟಿನ ಗುರಿ ನೀಡಲು ನೆರವಾದರು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಟೀಂ ಇಂಡಿಯಾ ೮ ವಿಕೆಟ್ ಗಳ ಭರ್ಜರಿ ಜಯ ಗಳಿಸಿತು. ಕಾನ್ಪುರದ ಹುಡುಗ ಕುಲದೀಪ್ ಯಾದವ್ ಮಾರಕ ದಾಳಿಗೆ ಇಂಗ್ಲೆಂಡ್ ತತ್ತರಿಸಿತು. 25 ರನ್ನಿಗೆ ೬ ವಿಕೆಟ್ ಕಬಳಿಸುವ ಮೂಲಕ ಕುಲದೀಪ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಗೌರವಕ್ಕೆ ಪಾತ್ರರಾದರು.