ಮಂಗಳೂರು, ಜು13: ಚರ್ಚ್ ಆಡಳಿತದ ಕೆಥೋಲಿಕ್ ಕ್ರಿಶ್ಚಿಯನ್ ಶಾಲೆಗಳಲ್ಲಿ ಭಾರತೀಯ ಸಂವಿಧಾನ ಕಲಿಕೆ ಕಡ್ಡಾಯವಾಗಲಿದೆ. ರಾಜ್ಯ ಸೇರಿದಂತೆ ದೇಶದ ಎಲ್ಲೆಡೆ ಕೆಥೋಲಿಕ್ ಕ್ರಶ್ಚಿಯನ್ ಚರ್ಚ್ ಆಡಳಿತದ 1 ರಿಂದ 10 ನೇ ತರಗತಿಯ ವರೆಗೆನ ಶಾಲೆಗಳಲ್ಲಿ ಭಾರತೀಯ ಸಂವಿಧಾನವನ್ನು ಗುರುವಾರ ಪಠ್ಯವಾಗಿ ಕಲಿಸಲು ತೀರ್ಮಾನಿಸಲಾಗಿದೆ.
ಭಾರತೀಯ ಕೆಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಶಿಕ್ಷಣ ಮತ್ತು ಸಂಸ್ಕೃತಿ ವಿಭಾಗ ಈ ಕುರಿತು ತೀರ್ಮಾನಿಸಿದ್ದು, ಭಾರತೀಯ ಸಂವಿಧಾನದ ಕುರಿತು ಬಾಲ್ಯದಿಂದಲೇ ಮಕ್ಕಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಕೆಥೋಲಿಕ್ ಕ್ರಿಶ್ಚಿಯನ್ ಆಡಳಿತ ಮಂಡಳಿಯ ಶಾಲೆಗಳಲ್ಲಿ ಭಾರತೀಯ ಸಂವಿಧಾನ ಕಲಿಕೆ ಕಡ್ಡಾಯಗೊಳ್ಳಲಿದೆ. ಈಗಾಗಲೇ, ಸಂವಿಧಾನದ ಪೀಠಿಕೆಯಲ್ಲಿ ನಮೂದಿತ ವಿಷಯ ಕಲಿಸಲು 9 ಪುಟಗಳ ಕೈಪಿಡಿ ಸಿದ್ದಗೊಳಿಸಲಾಗಿದೆ.
ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಕೆಥೋಲಿಕ್ ಧರ್ಮಾಧ್ಯಕ್ಷರ 33 ನೇ ಅಧಿವೇಶನದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ಈ ಅಧಿವೇಶನದಲ್ಲಿ ದೇಶದ 176 ಮಂದಿ ಕ್ರೈಸ್ತ ಧರ್ಮಾಧ್ಯಕ್ಷರು ಭಾಗವಹಿಸಿದ್ದರು. ಈ ಆಧಿವೇಶನದಲ್ಲಿ ಕೈಗೊಂಡ 20 ಪ್ರಮುಖ ನಿರ್ಣಯಗಳಲ್ಲಿ ಸಂವಿಧಾನ ಕಲಿಕಾ ನಿರ್ಣಯ ಕೂಡ ಒಂದಾಗಿದೆ.