ಬ್ರಹ್ಮಾವರ, ಫೆ.15(DaijiworldNews/PY): ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ಡೆಯಂಗಡಿ ಎಂಬಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿದ ಘಟನೆ ಫೆ.14ರ ರವಿವಾರದಂದು ನಡೆದಿದೆ.

ಸಾಂದರ್ಭಿಕ ಚಿತ್ರ
ಮೃತರನ್ನು ಹೊಸೂರು ನಿವಾಸಿ ನವೀನ್ ನಾಯ್ಕ್ (43) ಎಂದು ಗುರುತಿಸಲಾಗಿದೆ.
ಹತ್ಯೆಗೆ ಸಂಬಂಧಿಸಿದಂತೆ ಗೌತಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರವಿವಾರ ತಡರಾತ್ರಿ ಗೌತಮ್ ಸೇರಿದಂತೆ ಐದಾರು ಜನರ ಗುಂಪು ನವೀನ್ನ ಮೇಲೆ ಹಲ್ಲೆ ನಡೆಸಿದ್ದು, ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಗೌತಮ್ಗೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದ್ದು, ಇದನ್ನು ನವೀನ್ ಪ್ರಶ್ನಿಸಿದ್ದರು. ಕಳೆದ ಕೆಲವು ದಿನಗಳಿಂದ ಗೌತಮ್ ಮಹಿಳೆಯೊಂದಿಗೆ ದೂರವಾಣಿ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ನವೀನ್ ಹತ್ಯೆಗೆ ಸಂಬಂಧಿಸಿದಂತೆ , ಅವರ ಪುತ್ರ ನಿತಿನ್ ನಾಯ್ಕ್ (15) ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಕಳೆದ ಕೆಲವು ದಿನಗಳಿಂದ ನೆರೆಮನೆಯ ಮಹಿಳೆ ಮನೆಗೆ ಬರುತ್ತಿದ್ದ ಗೌತಮ್ ಈ ಕೃತ್ಯ ಎಸಗಿರಬಹುದು ಎಂದು ಆರೋಪಿಸಿದ್ದಾರೆ.
ರವಿವಾರ ನಿತಿನ್ ತನ್ನ ತಾಯಿ ಹಾಗೂ ಕಿರಿಯ ಸಹೋದರ ಮಹೇಶ್ನನ್ನು ಬೈಕ್ನಲ್ಲಿ ಕರೆದೊಯ್ದು ಅವರ ಸ್ನೇಹಿತನ ನಿವಾಸದ ಬಳಿ ಬಿಟ್ಟುಬಂದಿದ್ದ. ರಾತ್ರಿ 8.15ರ ಸುಮಾರಿಗೆ ನಿತಿನ್ ಮನೆಗೆ ಹಿಂದಿರುಗಿದಾಗ ಅವನ ತಂದೆ ನವೀನ್ ಟಿವಿ ನೋಡುತ್ತಿದ್ದರು. ಬಳಿಕ ನಿತಿನ್ ತನ್ನ ಸಹೋದರ ಕೀರ್ತನ್ನನ್ನು ಬೈಕ್ನಲ್ಲಿ ಕರೆದೊಯ್ದಿದ್ದಾನೆ. ಮಹೇಶ್ ಎಂಬವರ ಮನೆಯಲ್ಲಿ ಊಟ ಮಾಡಿದ ಬಳಿಕ ಅವರು, ಅವರ ತಾಯಿ, ಸಹೋದರರು ಹಾಗೂ ಸ್ನೇಹಿತ ಮಹೇಶ್ ತಂದೆ ಮಂಜುನಾಥ್ ರಾತ್ರಿ 10ರ ಸುಮಾರಿಗೆ ಮನೆಗೆ ಮರಳಿದ್ದರು. ಈ ವೇಳೆ ನವೀನ್ ಅವರು ಮನೆಯ ಅಂಗಳದಲ್ಲಿ ಬಿದ್ದಿರುವುದು ಕಂಡು ಬಂದಿದೆ. ಅಲ್ಲದೇ, ರಕ್ತ ಹರಿಯುತ್ತಿತ್ತು. ಈ ವೇಳೆ ಅವರು ನವೀನ್ ಅವರನ್ನು ಕರೆದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಗ ಮಂಜುನಾಥ್ ಅವರ ನೆರೆ ಮನೆಯ ನಾರಾಯಣ ನಾಯ್ಕ್ ಎಂಬವರು ಬಂದು ಪರಿಶೀಲಿಸಿದಾಗ ನವೀನ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಿತಿನ್ ತನ್ನ ಸಹೋದರ ಕೀರ್ತನ್ನನ್ನು ಬೈಕ್ನಲ್ಲಿ ಕರೆದೊಯ್ಯುತ್ತಿದ್ದಾಗ, ತನ್ನ ಮನೆಯ ಸಮೀಪದ ರಸ್ತೆಯಲ್ಲಿ ಕಾರೊಂದು ನಿಂತಿರುವುದು ಕಂಡುಬಂದಿದ್ದು, ಆ ಕಾರು ನಿತಿನ್ ಬೈಕ್ ಅನ್ನು ಹಿಂಬಾಲಿಸಿತ್ತು. ಬೈಕ್ ಮುಖ್ಯ ರಸ್ತೆಯಿಂದ ಒಳಗಿನ ರಸ್ತೆಗೆ ತಿರುಗಿದ ಸಂದರ್ಭ ಸ್ವಲ್ಪ ಮುಂದಕ್ಕೆ ಚಲಿಸಿದ ಕಾರು ಅಲ್ಲೇ ನಿಂತಿತ್ತು ಎನ್ನಲಾಗಿದೆ.
ಮಹಿಳೆ ನವೀನ್ನ ನೆರೆಮನೆಯವಳಾಗಿದ್ದು, ಆಕೆ ತನ್ನ ಮಗ ಶರತ್ ಜೊತೆ ವಾಸವಿದ್ದಳು. ಮಲ್ಪೆ ನಿವಾಸಿ ಗೌತಮ್ ಎಂಬಾತ ಆಗಾಗೆ ಆಕೆಯ ಮನೆಗೆ ಭೇಟಿ ನೀಡುತ್ತಿದ್ದ. ಸುಮಾರು 15 ದಿನಗಳ ಹಿಂದೆ ಮಹಿಳೆ ಹಾಗೂ ಗೌತಮ್ ಗುಡ್ಡೆಯಂಗಡಿ ಕ್ರಾಸ್ ಬಳಿ ನಿಂತಿದ್ದರು. ಆಕೆಯ ಮನೆಗೆ ಭೇಟಿ ಮಾಡುತ್ತಿರುವ ಬಗ್ಗೆ ನವೀನ್ ಗೌತಮ್ ಬಳಿ ಕೇಳಿದ್ದಾನೆ. ಇದು ಇಬ್ಬರ ನಡುವಿನ ವಾದಕ್ಕೆ ಕಾರಣವಾಗಿತ್ತು.
ಗೌತಮ್ನನ್ನು ನವೀನ್ ಪ್ರಶ್ನಿಸುವುದು ನಿಲ್ಲಿಸದಿದ್ದರೆ ಹತ್ಯೆ ಮಾಡಲು ಸಹ ಹಿಂಜರಿಯುವುದಿಲ್ಲ ಎಂದು ಮಹಿಳೆ ದೂರುದಾರರ ತಾಯಿಗೆ ತಿಳಿಸಿದ್ದಾಳೆ.
ಫೆ.14ರ ರವಿವಾರದಂದು ಕುಟುಂಬದ ಸದಸ್ಯರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಗೌತಮ್ ಹಾಗೂ ಇತರರು ನಮ್ಮ ನಿವಾಸಕ್ಕೆ ಬಂದಿದ್ದು, ಹತ್ಯೆ ಮಾಡುವ ಉದ್ದೇಶದಿಂದ ತಂದೆಯ ತಲೆಗೆ ಯಾವುದೋ ಆಯುಧದಿಂದ ಹೊಡೆದಿದ್ದಾರೆ ಎಂದು ನಿತಿನ್ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.