ಮಂಗಳೂರು, ಜು13: ಕರಾವಳಿಯಲ್ಲಿ ಕುರಲ್ ಹಬ್ಬ ಎಂದೇ ಕರೆಯಲಾಗುವ ಕ್ರೈಸ್ತರ ಮರಿಯಮ್ಮ ಜಯಂತಿಗೆ ಸಾರ್ವತ್ರಿಕ ರಜಾ ಘೋಷಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.
ಸುಮಾರು 4 ಲಕ್ಷಕ್ಕಿಂತಲೂ ಮಿಕ್ಕಿ ಕ್ರೈಸ್ತರು ಕರಾವಳಿಯಲ್ಲಿ ವಾಸಿಸುತ್ತಿದ್ದಾರೆ. ಕ್ರೈಸ್ತರು ಆಚರಿಸುವ ವಿಶೇಷ ಹಬ್ಬಗಳಲ್ಲಿ ಕುರಲ್ ಹಬ್ಬವೂ ಒಂದು. ಸೆಪ್ಟೆಂಬರ್ 8ರಂದು ಮರಿಯಮ್ಮ ಜಯಂತಿಯನ್ನು ಕರಾವಳಿಯಲ್ಲಿ ಆಚರಿಸುತ್ತಾರೆ. ಕ್ರೈಸ್ತ ಸಮುದಾಯದವರ ಈ ಮರಿಯಮ್ಮ ಜಯಂತಿ ವಿಶೇಷ ಹಬ್ಬಕ್ಕೆ ಕರಾವಳಿ ಜಿಲ್ಲೆಗಳನ್ನು ಸೀಮಿತಗೊಳಿಸಿ, ಸೆಪ್ಟೆಂಬರ್ 8ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆಯಾಗಿ ಘೋಷಿಸಬೇಕೆಂದು ಕೆಥೊಲಿಕ್ ಸಭಾ ಒತ್ತಾಯಿಸಿದೆ.
ಈ ಹಬ್ಬದ ಮಹತ್ವ ಮನವರಿಕೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಹಾಗೂ ಸಚಿವ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಮಾತ್ರವಲ್ಲ, ಕೆಥೊಲಿಕ್ ಸಭಾದ ಪದಾಧಿಕಾರಿಗಳು ಹಾಗೂ ಕ್ರೈಸ್ತ ಧರ್ಮಗುರುಗಳು ಸದ್ಯದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿದ್ದಾರೆ.
ಮರಿಯಮ್ಮ ಜಯಂತಿ ಕನ್ಯಾ ಮರಿಯಮ್ಮನವರ ಜನ್ಮದಿನವಾಗಿದ್ದು, ಆ ದಿನವನ್ನು ಕರಾವಳಿಯ ಕ್ರೈಸ್ತರು ಕೊಯ್ಲು ಹಬ್ಬವಾಗಿ ಆಚರಿಸುತ್ತಾರೆ. ರೈತರು ಬೆಳೆದ ಹೊಸ ಫಸಲನ್ನು ದೇವರಿಗೆ ಅರ್ಪಿಸಿ, ಪ್ರಾರ್ಥನಾ ಮಂದಿರಗಳಲ್ಲಿ ಪೂಜಾ ವಿಧಿಗಳೊಂದಿಗೆ ತಮ್ಮ ಮನೆಗಳಲ್ಲಿ ಸಹಭೋಜನ ಮಾಡುತ್ತಾರೆ.