ಉಡುಪಿ, ಜು13: ರಾಜ್ಯದ ಕರಾವಳಿಯಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಉಡುಪಿ ತಾಲ್ಲೂಕಿನ ಉದ್ಯಾವರ ಕನಕೋಡ ಪಡುಕರೆ ಕಡಲ ತೀರದಲ್ಲಿ ಕಡಲು ಪ್ರಕ್ಷುಬ್ದಗೊಂಡಿದ್ದು, ಬೃಹತ್ ಗಾತ್ರದ ತೆರೆಗಳು ನಿರಂತರವಾಗಿ ದಡಕ್ಕೆ ಅಪ್ಪಳಿಸುತ್ತಿವೆ.
ಕನಕೋಡ ಪಂಡರಿನಾಥ ಭಜನಾ ಮಂದಿರದ ಸಮೀಪ ಸುಮಾರು ಅರ್ಧ ಕಿ.ಮೀ ತನಕ ಕಾಂಕ್ರೀಟ್ ರಸ್ತೆಗೆ ಹಾನಿಯುಂಟಾಗಿದ್ದು, ಇದೇ ರೀತಿ ಕಡಲ್ಕೊರೆತ ಮುಂದುವರಿದಲ್ಲಿ ಉದ್ಯಾವರ ಪಡುಕರೆ ರಸ್ತೆ ತುಂಡಾಗಿ ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕನಕೋಡ ಪಡುಕರೆ ಕಡಲ ತೀರದಲ್ಲಿ ಕಡಲ್ಕೊರೆತ ಬಾಧಿಸದಂತೆ ಇರಿಸಲಾಗಿದ್ದ ಬೃಹತ್ ಗಾತ್ರದ ಕಲ್ಲುಗಳು ಅಲೆಗಳ ಆರ್ಭಟವನ್ನು ತಡೆಯಲು ವಿಫಲವಾಗಿವೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೃಹತ್ ಗಾತ್ರದ ಕಲ್ಲುಗಳನ್ನು ಅಲೆಗಳು ಕಡಲಾಳಕ್ಕೆ ಎಳೆದೊಯ್ಯುತ್ತಿವೆ. ಮಾತ್ರವಲ್ಲ, ಕಡಲ್ಕೊರೆತ ತೀವ್ರಗೊಂಡಿರುವುದರಿಂದ ಹೆಜಮಾಡಿ, ಕಾಪುವಿನಿಂದ ಮಲ್ಪೆ ಸಂಪರ್ಕಿಸುವ ಏಕೈಕ ರಸ್ತೆ ಕಡಿದು ಹೋಗುವ ಭೀತಿಯಲ್ಲಿದೆ.
ಕಡಲ್ಕೊರೆತದಿಂದ ಪಂಡರಿನಾಥ ಭಜನಾ ಮಂದಿರದ ಸಮೀಪವಿರುವ ಅನೇಕ ಮನೆಗಳು ಸಂಕಷ್ಟದಲ್ಲಿದ್ದು, ಅಪಾಯ ನಿರ್ಮಾಣವಾಗಿದೆ. ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.