ಮಣಿಪಾಲ, ಫೆ.15 (DaijiworldNews/HR): ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ಮತ್ತು ರಕ್ತಶಾಸ್ತ್ರ ವಿಭಾಗದಲ್ಲಿ ಇಂದು ಅಂತರಾಷ್ಟೀಯ ಬಾಲ್ಯ ಕ್ಯಾನ್ಸರ್ ದಿನವನ್ನು ಆಚರಿಸಲಾಯಿತು.


ಕಾರ್ಯಕ್ರಮದ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದ್ದು, ಪ್ರತೀ ವರ್ಷ 15ನೇ ಫೆಬ್ರವರಿಯಂದು ವಿಶ್ವಾದ್ಯಂತ ಆಚರಿಸಲಾಗುತ್ತಿದ್ದು, ಕೆಎಂಸಿ ಡೀನ್ ಡಾ. ಶರತ್ ಕೆ ರಾವ್, ವೈದ್ಯಕೀಯ ಅಧೀಕ್ಷ ಡಾ. ಅವಿನಾಶ್ ಶೆಟ್ಟಿ ಜಂಟಿಯಾಗಿ ಕ್ಯಾನ್ಸರ್ ನಿಂದ ಮುಕ್ತರಾದ ಮಕ್ಕಳೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಶರತ್ ರಾವ್, "ಪ್ರತೀ ವರ್ಷ ಜಗತ್ತಿನಾದ್ಯಂತ ಸುಮಾರು ಮೂರು ಲಕ್ಷ ಮಕ್ಕಳು ಹೊಸದಾಗಿ ಕ್ಯಾನ್ಸರ್ ಗೆ ತುತ್ತಾಗುತ್ತಾರೆ. ಭಾರತದಲ್ಲಿ ಇದರ ಸಂಖ್ಯೆ 40ಸಾವಿರದಿಂದ 45 ಸಾವಿರದಷ್ಟು. ಸರಿಯಾದ ಸಮಯದಲ್ಲಿ ರೋಗ ಪತ್ತೆ ಹಚ್ಚಿ ಅದಕ್ಕೆ ಸರಿಯಾದ ಕೇಂದ್ರದಲ್ಲಿ ಚಿಕಿತ್ಸೆ ನೀಡಿದರೆ, ಮಕ್ಕಳ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇಕಡ 80 ರಿಂದ 90 ರಷ್ಟು ಮಂದಿಗೆ ವಾಸಿಯಾಗುವಂತೆ ಮಾಡಿದ್ದಾರೆ. ಭಾರತದಲ್ಲಿ ಇದರ ಪ್ರಮಾಣ ಶೇಕಡಾ 50 ರಿಂದ ಒಳಗೆ ಇದೆ. ಇದಕ್ಕೆ ಕಾರಣ ರೋಗಪತ್ತೆ ಹಚ್ಚುವಲ್ಲಿನ ವಿಳಂಬ, ಮೂಢನಂಬಿಕೆ ಮತ್ತು ಸರಿಯಾಗಿ ಚಿಕಿತ್ಸೆ ನೀಡುವ ಕೇಂದ್ರಗಳ ಕೊರತೆ. ಯಾವುದೇ ಮಕ್ಕಳಿಗೆ ತೂಕ ಕಡಿಮೆಯಾಗವುದು, ಮಲಬದ್ಧತೆ, ಮೈಯಲ್ಲಿ ಗಂಟುಗಳು ಕಾಣಿಸುವುದು ಅಥವಾ ಊತ ಬರುವುದನ್ನು ನಿರ್ಲಕ್ಷಿಸಬಾರದು" ಎಂದರು.
ಡಾ ಅವಿನಾಶ್ ಶೆಟ್ಟಿ ಮಾತನಾಡಿ, "2021ರಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಮಕ್ಕಳ ಕ್ಯಾನ್ಸರ್ ಅನ್ನು ಒಂದು ಪ್ರಮುಖ ರೋಗವೆಂದು ಗುರುತಿಸಿದೆ ಮತ್ತು 2030ರ ಹೊತ್ತಿಗೆ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಶೇಕಡಾ 60 ರಿಂದ 65 ರಷ್ಟು ಗುಣಪಡಿಸುವ ಗುರಿಯನ್ನು ಇಟ್ಟುಕೊಂಡಿದೆ. ಕಸ್ತೂರ್ಬಾ ಆಸ್ಪತ್ರೆಯ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ಅತ್ಯಾಧುನಿಕ ವ್ಯವಸ್ಥೆ ಇದೆ" ಎಂದು ಹೇಳಿದರು.