ಮಂಗಳೂರು, ಫೆ.16 (DaijiworldNews/PY): "ಸಂತ ಸೇವಾಲಾಲ್ ಅವರ ವಿಚಾರಧಾರೆಗಳು ಹಾಗೂ ಹಿತವಾಣಿಗಳನ್ನು ಸಮಾಜಕ್ಕೆ ತಿಳಿಸುವುದರೊಂದಿಗೆ ಅವರ ಮಾರ್ಗಗಳನ್ನು ಅನುಸರಿಸಬೇಕು" ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ.ವಿ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಫೆ.15ರ ಸೋಮವಾರದಂದು ನಡೆದ ಸಂತ ಸೇವಾಲಾಲ್ ಅವರ 282ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
"ಬಂಜಾರ ಸಮುದಾಯವನ್ನು ಉತ್ತಮ ಮಟ್ಟಕ್ಕೆ ತರುವಲ್ಲಿ ಸಂತ ಸೇವಾಲಾಲ್ ಅವರ ಪರಿಶ್ರಮ ಅಪಾರವಾದದ್ದು. ಅವರ ಅಮೂಲ್ಯ ಸಂದೇಶಗಳು ಮತ್ತು ಹಿತವಾಣಿಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯಗಳು ನಡೆಯಬೇಕು" ಎಂದರು.
"ಬಂಜಾರ ಸಮುದಾಯದ ವೇಷ, ಭೂಷಣ ಹಾಗೂ ಆಚರಣೆಗಳು ಬಹಳ ವಿಭಿನ್ನವಾಗಿವೆ. ಆದರೆ ಕೆಲವು ಕಡೆಗಳಲ್ಲಿ ಈ ಜನಾಂಗದ ವೇಷ, ಭೂಷಣ ಹಾಗೂ ಆಚರಣೆಗಳು ಕಡಿಮೆಯಾಗುತ್ತಿದ್ದು, ಇಂತಹ ವಿಶೇಷ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ" ಎಂದರು.
"ಸೇವಾಲಾಲ್ ಅವರು ಸಮಾಜದ ಸುಧಾರಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರ ಪ್ರಾಮಾಣಿಕತೆ, ನಿಸ್ವಾರ್ಥ ಮನೋಭಾವ ಹಾಗೂ ಸಂಘಟನಾ ಚತುರತೆಯನ್ನು ಹೊಂದಿದ್ದರು ಜೊತೆಗೆ ಮಾನವತಾವಾಧಿಯಾಗಿದ್ದರು" ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಪ್ರೊಬೆಷನರಿ ಐ.ಎ.ಎಸ್ ಮೋನ್ಹಾ ರೋತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್. ಜಿ, ಕರಾವಳಿ ಸೇವಾಲಾಲ್ ಬಂಜಾರ ಸಂಘದ ಅಧ್ಯಕ್ಷ ಜಯಪ್ಪ ಲಂಬಾಣಿ, ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.