ಪುತ್ತೂರು, ಸೆ28: ಮುತ್ತಿನ ನಗರಿ ಎಂದೇ ಪ್ರಸಿದ್ಧಿಯನ್ನು ಹೊಂದಿರುವ ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜೇನು ವ್ಯವಸಾಯಗಾರರ ಸಂಘವೊಂದಿದೆ. ಇದೀಗ ಈ ಸಂಘವು ಸತತ ಪರಿಶ್ರಮದ ಫಲವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇರುವ ಜೇನು ಬೆಳೆಗಾರರಿಂದ, ಪುತ್ತೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಜೇನು ವ್ಯವಸಾಯಗಾರರ ಸಂಘವು ಜೇನನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದೆ. ಬೇರೆ ಬೇರೆ ಜೇನು ಬೆಳೆಗಾರರಿಂದ ಸಂಗ್ರಹಿಸಿದ ಜೇನನ್ನು ಸಂಸ್ಕರಿಸಿ ಮಾರಾಟ ಮಾಡುವ ಕಾರ್ಯವನ್ನು ಕಳೆದ 80 ವರ್ಷಗಳಿಂದ ಈ ಸಂಘವು ನಡೆಸಿಕೊಂಡು ಬರುತ್ತಿದೆ.
ಸುಳ್ಯ ತಾಲೂಕಿನ ಕುಗ್ರಾಮವಾದ ಚೊಕ್ಕಾಡಿಯಲ್ಲಿ ಅಂಬೆಗಾಲಿಡುತ್ತಾ ಬೆಳೆದು ಆರಂಭವಾದ ಈ ಸಂಘ ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಗೆ ತನ್ನ ಉತ್ಪನ್ನಗಳನ್ನು ಕಳುಹಿಸುತ್ತಿದೆ. ಬೇರೆ ಬೇರೆ ಕಡೆಯಿಂದ ಸಂಗ್ರಹಿಸಿದ ಜೇನನ್ನು ತನ್ನ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ಉತೃಷ್ಟ ಗುಣಮಟ್ಟದ ಜೇನನ್ನು ಈ ಸಂಘ ಸಂಗ್ರಹಿಸುತ್ತದೆ. ಬಳಿಕ ಆ ಜೇನನ್ನು ಬಾಟಲಿಗಳಲ್ಲಿ ತುಂಬಿ ಮಾಧುರಿ ಜೇನು ಎನ್ನುವ ಹೆಸರಿನಲ್ಲಿ ಮಾರುಕಟ್ಟೆಗೆ ತಲುಪಿಸುತ್ತಿದೆ. ಮೊದ ಮೊದಲು ಕೇವಲ ದಕ್ಷಿಣ ಕನ್ನಡ ಜಿಲ್ಲೆಯ ಮಾರುಕಟ್ಟೆಗಷ್ಟೇ ಈ ಸಂಘದ ಜೇನು ಸೀಮಿತವಾಗಿತ್ತು. ಆದರೆ ಇದೀಗ ತನ್ನ ಉತೃಷ್ಟ ಗುಣಮಟ್ಟದಿಂದಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾರೀ ಬೇಡಿಕೆಯಿರುವ ಜೇನಾಗಿ ಗುರುತಿಸಲ್ಪಟ್ಟಿದೆ.
ಅತ್ಯುತ್ತಮ ಗುಣಮಟ್ಟದ ಜೇನು ಉತ್ಮನ್ನಗಳಿಂದ ಈ ಸಂಘವು ಬೇರೆ ಕಂಪೆನಿಯ ಜೇನಿನ ಉತ್ಪನ್ನಗಳಿಗೆ ಪೈಪೋಟಿ ನೀಡುತ್ತಿದೆ. ಪುತ್ತೂರಿನ ದಕ್ಷಿಣ ಕನ್ನಡ ಜಿಲ್ಲಾ ಜೇನು ವ್ಯವಸಾಯಗಾರರ ಸಂಘವು ಉಳಿದೆಲ್ಲಾ ಕಂಪೆನಿಗಳಿಗಿಂತ ಒಂದು ಹೆಜ್ಜೆ ಮುಂದೆ ಎನ್ನುವಂತೆ ತನ್ನ ಉತ್ಪನ್ನವನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೂ ಮುಟ್ಟಿಸಿದೆ. ಈ ಸಂಘವು ಮಧ್ಯಪ್ರಾಚ್ಯ ದೇಶಗಳಿಗೆ ಈಗಾಗಲೇ 750 ಕಿಲೋ ಜೇನು ಮಾರಾಟ ಮಾಡಿದ್ದು, ಅಕ್ಟೋಬರ್ ತಿಂಗಳಲ್ಲಿ ಮತ್ತೆ 1500 ಕಿಲೋ ಜೇನು ರಪ್ತು ಮಾಡಲಿದೆ.
ವರ್ಷದಿಂದ ವರ್ಷಕ್ಕೆ ಜೇನಿನ ಸಂಗ್ರಹ ಹಾಗೂ ಮಾರಾಟದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಈ ಸಂಘ ಕಳೆದ ಬಾರಿ 1.87 ಕೋಟಿ ರೂಪಾಯಿಗಳ ವಹಿವಾಟು ನಡೆಸಿದೆ. ಮಾತ್ರವಲ್ಲದೇ, ಈ ಬಾರಿ 2 ಕೋಟಿಗೂ ಮಿಕ್ಕಿ ವಹಿವಾಟು ನಡೆಸಬೇಕೆನ್ನುವ ಗುರಿ ಹೊಂದಿದೆ. ಕೇವಲ ಜೇನು ಮಾತ್ರವಲ್ಲದೆ, ಜೇನು ಸಾಕಾಣಿಕೆಗೆ ಬೇಕಾದ ಉಪಕರಣಗಳನ್ನೂ ಕೂಡ ಈ ಸಂಘ ನೀಡುತ್ತಿದೆ.
ಪುತ್ತೂರು ಎನ್ನುವ ಪುಟ್ಟ ಊರಿನಲ್ಲಿ ತಯಾರಾಗುವ ಜೇನು ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವುದು ಸಂಘದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕೇವಲ ಸಂಘದ ಅಭಿವೃದ್ಧಿ ಮಾತ್ರವಲ್ಲದೆ, ಸಂಘದ ಸದಸ್ಯರ ಅಭಿವೃದ್ಧಿಯ ಕಡೆಗೂ ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಂಘ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ.