ಮಂಗಳೂರು, ಜು13: ನೂತನ ಸಮ್ಮಿಶ್ರ ಸರ್ಕಾರದ ಬಜೆಟ್ನಲ್ಲಿ ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿ ಕರಾವಳಿಯ ಜನತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಜೆಟ್ನಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕರಾವಳಿಗೆ ಅನುದಾನ ನೀಡಿಲ್ಲ. ಕರಾವಳಿ ಜಿಲ್ಲೆಗಳಿಗೆ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ಕರಾವಳಿಯ ಜನ ಸಾಮಾಜಿಕ ಜಾಲತಾಣದಲ್ಲಿ ಹೋರಾಟದ ಮೂಲಕ ಗಂಭೀರ ಆರೋಪ ಮಾಡುತ್ತಿದ್ದಾರೆ. “ಕುಮಾರಸ್ವಾಮಿ ನಾಟ್ ಮೈ ಸಿಎಂ” ಎಂದು ಫೇಸ್ಬುಕ್ ಪೇಜ್ನಲ್ಲಿ ಸಿಎಂ ವಿರುದ್ಧ ಕರಾವಳಿಯ ಜನ ಅಭಿಯಾನ ಆರಂಭಿಸಿದ್ದು, ಅನುದಾನ ನೀಡದ ಕುಮಾರಸ್ವಾಮಿ ನಮ್ಮ ಮುಖ್ಯಮಂತ್ರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀನುಗಾರರಿಗೆ ದ್ರೋಹ ಮಾಡಿದ ಕುಮಾರಸ್ವಾಮಿಗೆ ಧಿಕ್ಕಾರ, ಕರಾವಳಿ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ಕಡಲ ಮಕ್ಕಳ ಒಡಲು ಬಗೆದ ದುಷ್ಟ ಸರ್ಕಾರ ಎಂಬ ಬೇರೆ ಬೇರೆ ರೀತಿಯ ಪ್ಲೇ ಕಾರ್ಡ್ಗಳನ್ನು ಹಾಕಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕರಾವಳಿಯಲ್ಲಿ ಬಜೆಟ್ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ನಡೆದಿದ್ದು, ಈಗ ಫೇಸ್ಬುಕ್ ಮುಖಾಂತರವಾಗಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.