ಮಂಗಳೂರು, ಫೆ.16 (DaijiworldNews/MB) : ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು 18ರ ಹರೆಯದ ಸ್ವೀಡಿಷ್ ಸಾಮಾಜಿಕ ಹೋರಾಟಗಾರ್ತಿ ಗ್ರೆಟಾ ಥಂಬರ್ಗ್ ಹಂಚಿಕೊಂಡಿದ್ದ ರೈತರ ಪ್ರತಿಭಟನೆಯ ಟೂಲ್ಕಿಟ್ಗೆ ವಿಷಯಕ್ಕೆ ಸಂಬಂಧಿಸಿ ಬಂಧಿಸಿರುವುದನ್ನು ಫೆಬ್ರವರಿ 16 ರ ಮಂಗಳವಾರ ಶಾಸಕ ಯು ಟಿ ಖಾದರ್ ಅವರು ಖಂಡಿಸಿದ್ದಾರೆ.


ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಖಾದರ್ ಅವರು, "ಟೂಲ್ಕಿಟ್ ಕೇವಲ ಮುಕ್ತ ದಾಖಲೆಯಷ್ಟೇ. ವಿದೇಶಿಯರು ಮಾಡಿದ ಟ್ವೀಟ್ ಅನ್ನು ಬರೀ ಫಾರ್ವರ್ಡ್ ಮಾಡಿದ್ದಕ್ಕಾಗಿ ದಿಶಾ ರವಿ ಅವರನ್ನು ಬಂಧಿಸುವ ಅಗತ್ಯವೇನು?'' ಎಂದು ಪ್ರಶ್ನಿಸಿದ್ದು, ''ಪ್ರತಿ ಪಕ್ಷದ ಐಟಿ ಸೆಲ್ಗೆ ಒಂದು ಟೂಲ್ಕಿಟ್ ಇದೆ. ನನ್ನ ಜ್ಞಾನದ ಪ್ರಕಾರ ಇದು ಕೇವಲ ಮುಕ್ತ ದಾಖಲೆ. ಇದರಲ್ಲಿ ಯಾವುದೇ ರಹಸ್ಯ ವಿಚಾರವಿಲ್ಲ'' ಎಂದು ಹೇಳಿದ್ದಾರೆ.
"ಇದು ಸ್ವಾತಂತ್ರ್ಯವನ್ನು ನಿಗ್ರಹಿಸುವುದಲ್ಲದೆ ಮತ್ತೇನಲ್ಲ. ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿಯನ್ನು ಬಂಧಿಸಿದಾಗ ಕರ್ನಾಟಕ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಏಕೆ ಮೌನವಾಗಿದ್ದಾರೆ? ರಾಜ್ಯ ಸರ್ಕಾರ ಮೌನವಾಗಿರುವುದು ಮತ್ತು ಶರಣಾಗಿರುವುದು ನೋಡುವುದು ನಾಚಿಕೆಗೇಡಿನ ಸಂಗತಿ'' ಎಂದು ಕಿಡಿಕಾರಿದ್ದಾರೆ.
"ರೈತರ ಪರವಾಗಿ ನಿಲ್ಲುವವರನ್ನು ಮೌನಗೊಳಿಸುವುದು ಮತ್ತು ರೈತರ ಪ್ರತಿಭಟನೆಯನ್ನು ಹತ್ತಿಕ್ಕುವುದು ಇದರ ಉದ್ದೇಶವಾಗಿದೆ. ರಾಜ್ಯ ಸರ್ಕಾರವು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು.ದಿಶಾ ರವಿ ಬಂಧನದ ಬಗ್ಗೆ ಮೌನ ಮುರಿಯಬೇಕು'' ಎಂದು ಆಗ್ರಹಿಸಿದ್ದಾರೆ.
ಇನ್ನು ಈ ವೇಳೆಯೇ, ''ಉಳ್ಳಾಲ ಸರ್ಕಾರಿ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ 35 ಲಕ್ಷ ಮೌಲ್ಯದ ಹೊಸ ಆಯುಷ್ ಬ್ಲಾಕ್ ನಿರ್ಮಾಣವಾಗಲಿದೆ'' ಎಂದು ಮಾಹಿತಿ ನೀಡಿದರು. "ಇದಕ್ಕಾಗಿ ಹಣ ಮಂಜೂರು ಮಾಡಲಾಗಿದೆ. ಈ ವಾರ ಹೊಸ ಬ್ಲಾಕ್ಗೆ ಅಡಿಪಾಯ ಹಾಕುವ ನಿರೀಕ್ಷೆಯಿದೆ. ಆಯುರ್ವೇದ, ಹೋಮಿಯೋಪತಿ, ಅಲೋಪತಿ ಮತ್ತು ಯುನಾನಿ ಚಿಕಿತ್ಸೆಯನ್ನು ಒಂದೇ ಸೂರಿನಡಿ ಪಡೆಯುವುದು ಹೊಸ ಬ್ಲಾಕ್ನ ಹಿಂದಿನ ಉದ್ದೇಶವಾಗಿದೆ" ಎಂದು ವಿವರಿಸಿದರು.
''ತಲಪಾಡಿ ಟೋಲ್ಗೇಟ್ನಲ್ಲಿ ಫಾಸ್ಟಾಗ್ ವಿಚಾರದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಸಂಸದ ನಳಿನ್ ಕುಮಾರ್ ಕಟೀಲ್, ಉಪ ಆಯುಕ್ತರು ಮತ್ತು ನವಯುಗದ ಅಧಿಕಾರಿಗಳು ಮತ್ತು ಬಸ್ ಸಂಘಗಳ ಪ್ರತಿನಿಧಿಗಳು ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಬೇಕು'' ಎಂದು ಒತ್ತಾಯಿಸಿದರು. "ತಲಪಾಡಿ ಟೋಲ್ಗೇಟ್ನಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ, ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹದಿಂದಾಗಿ ನಗರ ಬಸ್ಗಳು ಮತ್ತು ಸ್ಥಳೀಯ ಬಸ್ಗಳು ಟೋಲ್ ಗೇಟ್ ದಾಟಲು ನಿರಾಕರಿಸುತ್ತಿವೆ" ಎಂದರು.