ಬೆಂಗಳೂರು, ಜು 13: ಡ್ರಗ್ಸ್ ಮಾಫಿಯಾ ರಾಜ್ಯದಲ್ಲಿ ಬೇರೂರುತ್ತಿರುವ ಬಗ್ಗೆ ಒಂದೆಡೆ ಚರ್ಚೆಗಳು ನಡೆಯುತ್ತಿದ್ದಂತೆಯೇ ಬಿಜೆಪಿ ಶಾಸಕ ಕಳಕಪ್ಪ ಬಂಡಿ ಅವರು ತಮ್ಮ ಮಗನೂ ಡ್ರಗ್ಸ್ ಮಾಫಿಯಾಗಳ ಕಪಿಮುಷ್ಟಿಗೆ ಸಿಲುಕಿದ ಬಗ್ಗೆ ಸದನದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇಂದು ವಿಧಾನಸಭೆಯಲ್ಲಿ ಡ್ರಗ್ಸ್ ಧಂದೆಗೆ ಯುವ ಸಮೂಹ ಬಲಿಯಾಗುತ್ತಿರುವ ವಿಚಾರ ಪ್ರಸ್ತಾಪಿಸಿದ ಬಿಜೆಪಿಯ ಆರ್ ಅಶೋಕ್ ಅವರು, ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಿತಿ ಮೀರುತ್ತಿದೆ. ಹೀಗಾಗಿ ಡ್ರಗ್ಸ್ ಮಾರಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಅಡಿ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಶಾಸಕ ಕಳಕಪ್ಪ ಬಂಡಿ, ತನ್ನ ಮಗನೂ ಡ್ರಗ್ಸ್ ಅಡಿಕ್ಟ್ ಆಗಿದ್ದ. ದಯವಿಟ್ಟು ರಾಜ್ಯ ಸರ್ಕಾರ ಇದರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದರು . ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕಾಗಿ ದಾಖಲಾದ ನನ್ನ ಮಗ ಕೇವಲ ಒಂದೇ ವರ್ಷದಲ್ಲಿ ಮಾದಕ ವಸ್ತುಗಳ ವ್ಯಸನಿ ಆಗಿಬಿಟ್ಟಿದ್ದ. ತರಗತಿಗಳಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಈ ಎಲ್ಲಾ ವಿಚಾರಗಳು ನಮಗೆ ಗೊತ್ತಾಗಲು ಆರು ತಿಂಗಳು ಬೇಕಾಯಿತು. ಇದೊಂದು ದೊಡ್ಡ ಮಾಫಿಯಾ. ಮಕ್ಕಳು, ವಿದ್ಯಾರ್ಥಿಗಳನ್ನೇ ಗುರಿಯಾಗಿರಿಸಿ ಈಶಾನ್ಯ ರಾಜ್ಯದವರು ಡ್ರಗ್ಸ್ ಸರಬರಾಜು ಮಾಡುತ್ತಿದ್ದಾರೆ. ಡ್ರಗ್ಸ್ ಚಟದಿಂದ ನನ್ನ ಮಗನನ್ನು ಮುಕ್ತನನ್ನಾಗಿಸಲು ನನ್ನ ಕುಟುಂಬ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂದು ತಮ್ಮ ಮಗನ ಉದಾಹರಣೆಯನ್ನೇ ಸದನದ ಮುಂದಿಟ್ಟಿದ್ದರು.
ಈ ಸಂದರ್ಭ ಬಿಜೆಪಿಯ ಶಾಸಕರಾದ ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಕಾಂಗ್ರೆಸ್ ನ ಶಾಸಕ ಹ್ಯಾರಿಸ್ ಮುಂತಾದವರು ರಾಜ್ಯದಲ್ಲಿ ರಾಜರೋಷವಾಗಿ ನಡೆಯುತ್ತಿರುವ ಡ್ರಗ್ಸ್ ಹಾವಳಿ ಬಗ್ಗೆ ಕಳವಳ ವ್ಯಕ್ತಪಡಿಸಿ, ಇದನ್ನು ಮಟ್ಟಹಾಕಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ನಾವು ಕೂಡಾ ನಿಮ್ಮ ಜೊತೆ ಕೈಜೋಡಿಸುತ್ತೇವೆ ಎಂದು ಸರ್ಕಾರಕ್ಕೆ ವಿನಂತಿ ಮಾಡಿಕೊಂಡರು.
ಸದನದಲ್ಲಿ ಚರ್ಚೆ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಡ್ರಗ್ಸ್ ದಂಧೆಯಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸಿದ್ದವಾಗಿದ್ದು ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.