ಉಡುಪಿ, ಫೆ. 16 (DaijiworldNews/SM): "ಬಹಳಷ್ಟು ಜನ ಹಲವಾರು ಕನಸುಗಳನ್ನು ಕಟ್ಟಿಕೊಂಡು ಈ ನಿವೇಶನವನ್ನು ಖರೀದಿಸಿದ್ದಾರೆ. ಈಗ ಆ ನಿವೇಶನದಲ್ಲಿ ಮನೆ ಕಟ್ಟಲು ಆಗದೆ ಸೋತಿದ್ದೇವೆ. ಕಲಂ 14 ಮತ್ತ 21 ಉಲ್ಲಂಘನೆಯಾಗಿದೆ. ನಾವು ಆಡಳಿತದ ಮೇಲೆ ನಂಬಿಕೆ ಇಟ್ಟಿದ್ದೆವು. ನಮಗೆ ಮೋಸ ಆಗಿದೆ. ಭೂಮಿ ಈಗಾಗಲೇ ರಿಜಿಸ್ಟರ್ ಆಗಿದೆ. ಅದರೆ ಆಕ್ರಮ ಎಸಗಿದ್ದೇವೆ ಎಂದು ಬಿಂಬಿಸಲಾಗುತ್ತಿದ್ದಾರೆ", ಎಂದು ನಿವೇಶನದ ಸಂತ್ರಸ್ತರಾದ ತಾರನಾಥ ಹೆಗ್ಡೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ಮಂಗಳವಾರ ಉಡುಪಿ ನಗರ ಪ್ರಾಧಿಕಾರ ವ್ಯಾಪ್ತಿಯ ಮನೆ ನಿವೇಶನ ಹಗರಣದ ಸಂತ್ರಸ್ತರು ಉಡುಪಿ ನಗರ ಪ್ರಾಧಿಕಾರದ ಅಭಿವೃದ್ಧಿ ಕಚೇರಿಯ ಎದುರು ಸಾಂಕೇತಿಕ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು. ನಾವ್ಯಾರು ಆಕ್ರಮವಾಗಿ ಜಾಗ ಪಡೆದುಕೊಂಡಿಲ್ಲ. ಆತ್ಮಗೌರವಕ್ಕೆ ಚ್ಯುತಿ ಆದಾಗ ಪ್ರತಿಭಟನೆ ಮಾಡಲು ನಿರ್ಧರಿಸಿದೆವು. ಅಪರ ಜಿಲ್ಲಾಧಿಕಾರಿಯವರೂ ಕೂಡ ಈ ಬಗ್ಗೆ ತುಂಬ ಲಘುವಾಗಿ ಪ್ರತಿಕ್ರಿಯೆ ನೀಡಿದರು. ಡಾಕ್ಯುಮೆಂಟ್ ಬರಹಗಾರನಿಂದ ಈ ತಪ್ಪುಗಳು ನಡೆದಿವೆ. ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಆದಷ್ಟು ಬೇಗ ನ್ಯಾಯ ದೊರಕಿಸುವಂತೆ ಈ ಸಂದರ್ಭದಲ್ಲಿ ಆಗ್ರಹಿಸಿದರು.
ದೇವ್ ಹನೆಹಳ್ಳಿ ಮಾತನಾಡಿ, ನಮಗೇನು ರಸ್ತೆ ರೋಖೋ ಮಾಡುವುದು ಕಷ್ಟದ ಕೆಲಸವಲ್ಲ. ಆದರೆ ಯಾವ ಅಮಾಯಕನಿಗೂ ಅನ್ಯಾಯ ಮಾಡುವುದಿಲ್ಲ. ನಾವೂ ಕಲ್ಲೆತ್ತಿ ಹೊಡೆಯಬಹುದು. ಆದರೆ ಅಂತಹ ಕ್ರೂರತೆಗೆ ಇಳಿಯುವಿದಿಲ್ಲ. ಸಜ್ಜನರನ್ನು, ನಾಗರೀಕರನ್ನು ಸತಾಯಿಸಬಾರದು ಎಂದು ಸರಕಾರಕ್ಕೂ ಗೊತ್ತಿರಬೇಕು. ಇದು ನ್ಯಾಯಲಯಕ್ಕೆ ಶೋಭೆಯಲ್ಲ. ನಮಗೆ ಈ ಜಾಗವನ್ನು ಮಾರುವ ಉದ್ದೇಶವಿಲ್ಲ. ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಿ ಎಂದು ನಗರ ಪ್ರಾಧಿಕಾರದ ಎದುರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂತ್ರಸ್ಥರಾದ ರಾಬರ್ಟ್ ಡಿಸೋಜ, ವಾಸುದೇವ ಗಡಿಯಾರ್, ಮೆಲ್ವಿನ್ ರೇಗೋ, ಸುಂದರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.