ಮಂಗಳೂರು, ಫೆ.17 (DaijiworldNews/MB) : ತರಕಾರಿ, ಮೀನು ಮತ್ತು ಇತರ ಸರಕುಗಳನ್ನು ಮಾರಾಟ ಮಾಡಲು ಫುಟ್ಪಾತ್ಗಳನ್ನು ಅತಿಕ್ರಮಿಸಿರುವ ಅನಧಿಕೃತ ಬೀದಿ ಬದಿ ವ್ಯಾಪಾರಸ್ಥರನ್ನು ಹೊರಹಾಕುವಂತೆ ಮೇಯರ್ ದಿವಾಕರ್ ಅವರು ಸಂಚಾರ ಪೊಲೀಸ್ ಇಲಾಖೆಯ ಆದಾಯ, ಆರೋಗ್ಯ ಅಧಿಕಾರಿಗಳಿಗೆ ಫೆಬ್ರವರಿ 16 ರ ಮಂಗಳವಾರ ನಿರ್ದೇಶನ ನೀಡಿದರು. ಈ ಮೂಲಕ ಪಾದಚಾರಿಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದರು.




ಸಿಟಿ ಕಾರ್ಪೊರೇಶನ್ನಲ್ಲಿ ನಡೆದ ಸಂಚಾರ ಸಮನ್ವಯ ಸಮಿತಿ ಸಭೆಯಲ್ಲಿ, ಫುಟ್ಪಾತ್ಗಳನ್ನು ಅತಿಕ್ರಮಿಸಲಾಗುತ್ತಿದೆ ಮತ್ತು ಇದು ಪಾದಚಾರಿಗಳಿಗೆ ತೊಂದರೆ ಉಂಟುಮಾಡುತ್ತಿದೆ ಎಂದು ಹಲವಾರು ಕಾರ್ಪೊರೇಟರ್ಗಳ ಆರೋಪಿಸಿರುವ ಹಿನ್ನೆಲೆಯಲ್ಲಿ ಮೇಯರ್ ಈ ನಿರ್ಧಾರ ಕೈಗೊಂಡಿದ್ದಾರೆ.
"ಕಾರ್ಪೋರೇಟರ್ಗಳಿಂದ ಯಾವುದೇ ಪ್ರಭಾವಕ್ಕೆ ಒಳಗಾಗದೆ, ಫುಟ್ಪಾತ್ಗಳನ್ನು ಆಕ್ರಮಿಸಿಕೊಳ್ಳುವವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಎಂಸಿಸಿ ಮಾರಾಟಗಾರರಿಗೆ ಫುಟ್ಪಾತ್ಗಳಲ್ಲಿ ಮಾರಾಟ ಮಾಡಲು ಅನುಮತಿ ನೀಡಿಲ್ಲ ಎಂದು ಮೇಯರ್ ಹೇಳಿದರು.
ಮಂಗಳೂರು ಟ್ರಾಫಿಕ್ ಸಮಸ್ಯೆಗಳ ಕುರಿತಂತೆ ಇಂದು ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ದಿವಾಕರ್ ಪಾಂಡೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ವಿನಯ್ ಎ ಗಾಂವ್ಕರ್, ಪ್ರಸ್ತುತ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ಖರೀದಿಯ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದ್ದಾರೆ. "ನಗರವು ಚಿಕ್ಕದಾಗಿರುವುದರಿಂದ ಸಮಚಾರದಟ್ಟಣೆ ಅಧಿಕವಾಗುತ್ತಿದೆ. ಆರ್ಟಿಒನ ಅಂಕಿಅಂಶಗಳ ಪ್ರಕಾರ ಚತುಷ್ಚಕ್ರ ವಾಹನಗಳ ಖರೀದಿ ಶೇಕಡಾ 20 ರಷ್ಟು ಹೆಚ್ಚಳ ಕಂಡಿದೆ" ಎಂದು ಡಿಸಿಪಿ ತಿಳಿಸಿದರು.
ಜನಪ್ರತಿನಿಧಿಗಳಿಂದ ಸಮಸ್ಯೆ ಹಾಗೂ ಪೊಲೀಸ್ ಡಿಸಿಪಿಯವರಿಂದ ಸಲಹೆ, ಸೂಚನೆಗಳು ಕೇಳಿ ಬಂದವು. ಇನ್ನು ವೀರನಗರ, ಫೈಸಲ್ ನಗರದ ಕಡೆಗೆ ಸಿಟಿ ಬಸ್ ಸರಿಯಾಗಿ ಸಂಚರಿಸದೆ ಜನರಿಗೆ ಕಷ್ಟವಾಗಿದೆ, ಬಸ್ಗಳು ಟ್ರಿಪ್ ಕಟ್ ಮಾಡುತ್ತಿವೆ ಎಂದು ಸದಸ್ಯರಾದ ಅಶ್ರಫ್, ಸುಧೀರ್ ಶೆಟ್ಟಿ ಕಣ್ಣೂರು ಆಕ್ಷೇಪಿಸಿದರು.
ಇನ್ನು ದ್ವಿಚಕ್ರ ವಾಹನವನ್ನು ಕಂಡಾಗ ಟೋಯಿಂಗ್ ವಾಹನದವರು ಹಸಿದ ಹುಲಿಯಂತೆ ಬರುತ್ತಾರೆ ಎಂದು ವಿನಯ್ರಾಜ್ ಹೇಳಿದರೆ, ಟೋವಿಂಗ್ ಮಾಡುವುದು ತಪ್ಪಲ್ಲ, ಆದರೆ ಅದರ ಸಿಬ್ಬಂದಿಗಳ ವರ್ತನೆ ಸರಿಯಿಲ್ಲ, ಜನರಲ್ಲಿ ಕೆಟ್ಟದಾಗಿ ಮಾತನಾಡುತ್ತಾರೆ, ಅದಕ್ಕೆ ಕಡಿವಾಣ ಹಾಕಬೇಕು, ವಾಹನ ಹೊತ್ತೊಯ್ಯುವಾಗ ಹಾನಿಯಾಗದಂತೆ ನೋಡಬೇಕು ಎಂದು ನವೀನ್ ಡಿಸೋಜಾ ಒತ್ತಾಯಿಸಿದರು.
ಸ್ಮಾರ್ಟ್ ಸಿಟಿಯ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟನೆ, ಪಾರ್ಕಿಂಗ್ ಹಾಗೂ ನೋ ಪಾರ್ಕಿಂಗ್ ಪ್ರದೇಶಗಳನ್ನು ಸಮರ್ಪಕವಾಗಿ ನಿಗದಿಪಡಿಸುವುದು, ರಸ್ತೆಗಳ ಅಗಲೀಕರಣದ ಸಂದರ್ಭ ಅವೈಜ್ಞಾನಿಕ ತಿರುವುಗಳಿಂದ ಮುಕ್ತಿ ಮೊದಲಾದ ಸಮಸ್ಯೆಗಳನ್ನು ಪರಿಹರಿಸಲು ಮಂಗಳೂರು ನಗರಕ್ಕೆ ಟ್ರಾಫಿಕ್ ಇಂಜಿನಿಯರಿಂಗ್ ತಜ್ಞ ತಂಡ ಅತೀ ಅಗತ್ಯವಿದೆ ಎಂದು ಮಂಗಳೂರು ಡಿಸಿಪಿ ವಿನಯ್ ಗಾಂವ್ಕರ್ ಸಲಹೆ ನೀಡಿದರು.
ಮಂಗಳೂರು ಹಾಗೂ ಸುರತ್ಕಲ್ ವಲಯಕ್ಕೆ ಪ್ರತ್ಯೇಕವಾಗಿ ತಂಡವನ್ನು ರಚಿಸಿ ಫುಟ್ಪಾತ್ನಲ್ಲಿ ಜನಸಾಮಾನ್ಯರಿಗೆ ನಡೆದಾಟಕ್ಕೆ ತೊಂದರೆಯಾಗುವ ಎಲ್ಲಾ ಕಡೆಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸಿ ಅಕ್ರಮ ವ್ಯಾಪಾರದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತರಾದ ಅಕ್ಷಯ್ ಶ್ರೀಧರ್ ಹೇಳಿದರು.
ಉಪ ಮೇಯರ್ ಜಾನಕಿ ಯಾನೆ ವೇದಾವತಿ, ವಿಪಕ್ಷ ನಾಯಕ ಅಬ್ದುಲ್ ರವೂಫ್, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಶರತ್ ಕುಮಾರ್, ಕಿರಣ್ ಕೋಡಿಕಲ್, ಜಗದೀಶ್ ಶೆಟ್ಟಿ, ಜಂಟಿ ಆಯುಕ್ತ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು.