ಉಡುಪಿ, ಫೆ.17 (DaijiworldNrews/HR): ಇತ್ತೀಚಿನ ಕೆಲವು ದಿನಗಳ ಹಿಂದೆ ಮಲ್ಪೆ ಜೀರೋ ಎನ್ನುವ ಬರಹದ ಗುರುತು ಮಲ್ಪೆ ಬಂದರಿನ ಗೇಟಿನ ಎದುರಿಗೆ ಇದ್ದ ಮೈಲುಗಲ್ಲು ಈ ಸ್ಟೇಟ್ ಬ್ಯಾಂಕ್ ಹತ್ತಿರ ಬಿದ್ದಿದೆ. ಇದರ ಹಿಂದೆ ಮಲ್ಪೆ ಉದ್ಯಮಿಗಳ ಕೈವಾಡ ಇರಬಹುದೇ. ಆ ಜೀರೋ ಮೈಲುಗಲ್ಲು ಬಂದರಿನ ಗೇಟಿನ ಎದುರೇ ಇರಬೇಕು ಎನ್ನುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಗೆ ತೆರೆ ಎಳೆದ ಉಡುಪಿ ಶಾಸಕ ಕೆ ರಘುಪತಿ ಭಟ್, "ಮಲ್ಪೆ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಹಾಕಿದ ಮೈಲುಗಲ್ಲಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಆದಿ ಉಡುಪಿಯಿಂದ ಮಲ್ಪೆ ಬಂದರಿನ ಗೇಟ್ವರೆಗೆ ಈ ರಸ್ತೆಯು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಆದಿ ಉಡುಪಿಯಿಂದ ಮಲ್ಪೆವರೆಗೆ ರಸ್ತೆ ಅಭಿವೃದ್ಧಿಗೆ ರೂ. 65.00 ಕೋಟಿ ವೆಚ್ಚದ ಅಂದಾಜು ಪಟ್ಟಿಯನ್ನು ಕೇಂದ್ರ ಭೂ ಸಾರಿಗೆ ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ. ಭೂಸ್ವಾಧೀನ ಪಡಿಸಲು ಪ್ರತ್ಯೇಕವಾಗಿ ರೂ. 12.00 ಕೋಟಿ ಮೀಸಲಿರಿಸಲಾಗಿದೆ. ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169(ಎ)ರ ಕರಾವಳಿ ಜಂಕ್ಷನ್ ವರೆಗೆ ರಸ್ತೆ ಅಗಲೀಕರಣ ಆಗಬೇಕು ಎನ್ನುವುದು ಉಡುಪಿ ಜನತೆಯ ಹಲವು ವರ್ಷದ ಬೇಡಿಕೆ. ಮಲ್ಪೆಯಿಂದ ಕರಾವಳಿ ಜಂಕ್ಷನ್ ವರೆಗಿನ 6 ಕಿಮಿ ಉದ್ದದ ರಸ್ತೆಯ ಭೂ ಸ್ವಾಧೀನ ಪ್ರಕ್ರಿಯೆ ಇನ್ನು ಕೂಡ ಆಮೆಗತಿಯಲ್ಲಿ ಸಾಗುತ್ತಿದೆ. ಇತ್ತೀಚೆಗಂತೂ ಮಲ್ಪೆ ಸೀ-ವಾಕ್, ಬೀಚ್ನಲ್ಲಿ ಮನೋರಂಜನಾ ಚಟುವಟಿಕೆಗಳು ಹೆಚ್ಚಾದಂತೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ವಾಹನ ಚಾಲಕರು ಟ್ರಾಫಿಕ್ ತೊಂದರೆ ಅನುಭವಿಸುತ್ತಿದ್ದಾರೆ. ಶನಿವಾರ ಮತ್ತು ಆದಿತ್ಯವಾರವಂತೂ ಇಲ್ಲಿ ಅರ್ಧಗಂಟೆಗಳ ಕಾಲ ಟ್ರಾಪೀಕ್ ಜಾಮ್ ಉಂಟಾಗುತ್ತದೆ. ಹಾಗಾಗಿ ರಸ್ತೆ ಅಗಲೀಕರಣ ಅವಶ್ಯಕವಾಗಿದೆ.