ಉಡುಪಿ, ಜು 13: ಕುಂಜಾರುಗಿರಿ ಶಂಕರಪುರ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗಿರುವ ತಾತ್ಕಾಲಿಕ ಕಿರು ಸೇತುವೆಯೊಂದು ಕುಸಿದು ಬೀಳುವ ಅಪಾಯದಲ್ಲಿದೆ. ಕುರ್ಕಾಲು ಗ್ರಾಮದ ಬಿಳಿಯಾರು ಎಂಬಲ್ಲಿ ಕುಂಜಾರು ಗಿರಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.
ಈ ಹಿಂದೆ ಇಲ್ಲಿನ ಗ್ರಾಮ ಪಂಚಾಯತ್ ರಸ್ತೆಗೆ ಕಿರು ಸೇತುವೆಯೊಂದನ್ನು ನಿರ್ಮಿಸಿತ್ತು. ಆದ್ರೆ ಈಗ ಸೇತುವೆ ನೆರೆ ನೀರಿನಿಂದ ಕುಸಿಯುವ ಭೀತಿಯಲ್ಲಿದೆ.ಈ ಭಾಗದಲ್ಲಿ 500 ಕ್ಕೂ ಹೆಚ್ಚು ಮನೆಗಳಿದ್ದು ಇಲ್ಲಿಯ ಜನರಿಗೆ ಹತ್ತಿರದ ಊರುಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಕೊಂಡಿಯಾಗಿದೆ. ಗ್ರಾಮಸ್ಥರ ಬೇಡಿಕೆಯ ಮೇರೆಗೆ ಕಿರು ಸೇತುವೆಯನ್ನು ಗ್ರಾಮ ಪಂಚಾಯತ್ ನಿರ್ಮಿಸಿತ್ತು. ವಿಪರ್ಯಾಸ ಅಂದರೆ ಕಿರು ಸೇತುವೆ ನಿರ್ಮಾಣವಾದ ಮರು ವರ್ಷವೇ ಕುಸಿಯಲು ಶುರುವಾಗಿದೆ. ಸೇತುವೆಯ ಎಲ್ಲಾ ಭಾಗದಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು ಸೇತುವೆ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ. ಇಲ್ಲಿನ ದುಸ್ಥಿಯ ಬಗ್ಗೆ ಸ್ಥಳೀಯಾಡಳಿತ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ. ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ವರ್ಗ ಎಚ್ಚೆತ್ತು ಸೂಕ್ತ ಸೇತುವೆ ನಿರ್ಮಿಸುವ ಅಗತ್ಯತೆ ಇದೆ ಎಂಬುವುದು ಗ್ರಾಮಸ್ಥರ ಆಗ್ರಹವಾಗಿದೆ.