ಕಾಸರಗೋಡು, ಫೆ. 17 (DaijiworldNews/SM): ವಿಧಾನಸಭಾ ಚುನಾವಣೆಗೆ ಜಿಲ್ಲೆ ಸಜ್ಜಾಗಿದ್ದು, ಜಿಲ್ಲೆಯಲ್ಲಿ 1591 ಮತಗಟ್ಟೆಗಳನ್ನು ಈ ಬಾರಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಸಾವಿರ ಮತದಾರರಿಗೆ ಒಂದು ಮತಗಟ್ಟೆ ಸಜ್ಜುಗೊಳಿಸಲಾಗಿದ್ದು, ಕಳೆದ ಚುನಾವಣೆಯಲ್ಲಿ 983 ಮತಗಟ್ಟೆಗಳಿತ್ತು. ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ 608 ಹೆಚ್ಚುವರಿ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. 44 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಹೇಳಿದರು.
ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಮತ ಸಾಮಾಗ್ರಿ ವಿತರಣೆ ಮತ್ತು ಎಣಿಕಾ ಕೇಂದ್ರ ವ್ಯವಸ್ಥೆ ಮಾಡಲಾಗಿದೆ. ಮಂಜೇಶ್ವರ ಕ್ಷೇತ್ರಕ್ಕೆ ಕುಂಬಳೆ ಸರಕಾರಿ ಹಯರ್ ಸೆಕಂಡರಿ ಶಾಲೆ, ಕಾಸರಗೋಡು ಸರಕಾರಿ ಕಾಲೇಜು, ಕಾಸರಗೋಡು, ಉದುಮ ಪೆರಿಯ ಪಾಲಿಟೆಕ್ನಿಕ್ ಕಾಲೇಜು, ಕಾಞ0ಗಾಡ್ ಪಡನ್ನ ನೆಹರೂ ಕಾಲೇಜು, ತೃಕ್ಕರಿಪುರ ಸರಕಾರಿ ಪಾಲಿಟೆಕ್ನಿಕ್ ತ್ರಿಕಾರಿಪುರ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.
ಪ್ರಚಾರಕ್ಕೆ ಪ್ರತಿ ಕ್ಷೇತ್ರದಲ್ಲಿ ಐದು ಮತಗಟ್ಟೆಗಳು:
ಚುನಾವಾಣಾ ಪ್ರಚಾರಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕೇಂದ್ರಗಳನ್ನು ಗುರುರುತಿಸಲಾಗಿದೆ. ಕೋವಿಡ್ ಮಾನದಂಡದಂತೆ ಪ್ರಚಾರಕ್ಕೆ ಅವಕಾಶ ನೀಡಲಾಗುವುದು ಚುನಾವಣಾ ಆಯೋಗದ ನಿಗಧಿಯಂತೆ ಪ್ರಚಾರಕ್ಕೆ ಮೈದಾನಗಳನ್ನು ನೀಡಲಾಗುವುದು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಭ್ಯರ್ಥಿ ಜೊತೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.