ಉಡುಪಿ, ಫೆ.18 (DaijiworldNews/PY): ಉಡುಪಿಯ ಪೆರ್ಡೂರಿನ ಶಿಲ್ಪಾ ಹೆಗ್ಡೆ ಅವರು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ನೇತೃತ್ವದ ಲಿಬರಲ್ ಪಾರ್ಟಿಯಿಂದ ವಿಕ್ಟೋರಿಯಾ ರಾಜ್ಯ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ.

ಇದು ಮಹತ್ವಾದ ನಿರ್ಣಯಗಳನ್ನು ಕೈಗೊಳ್ಳುವ ರಾಜ್ಯ ಕಮಿಟಿಯಾಗಿದೆ.
ಶಿಲ್ಪಾ ಹೆಗ್ಡೆ ಅವರು ಪೆರ್ಡೂರಿನ ಮೋಹನದಾಸ್ ಹೆಗ್ಡೆ ಹಾಗೂ ಶಶಿಕಲಾ ಹೆಗ್ಡೆ ದಂಪತಿಯ ಪುತ್ರಿಯಾಗಿದ್ದು, ಇವರು ಹುಟ್ಟಿ ಬೆಳೆದಿದ್ದು ಪೆರ್ಡೂರಿನಲ್ಲಿ. ನಿಟ್ಟೆಯಲ್ಲಿ ತಾಂತ್ರಿಕ ಶಿಕ್ಷಣವನ್ನು ಮುಗಿಸಿರುವ ಶಿಲ್ಪಾ, 2001 ರಿಂದ ಆಸ್ಟ್ರೇಲಿಯಾದಲ್ಲಿ ಸಾಫ್ಟ್ವೇರ್ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿಲ್ಪಾ ಹೆಗ್ಡೆ ಅವರು, ಆಸ್ಟ್ರೇಲಿಯಾದ ಹತ್ತು ಮಹಿಳಾ ರಾಜಕಾರಣಿಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು, 2013ರಲ್ಲಿ ಆಸ್ಟ್ರೇಲಿಯಾ ಫೆಡರಲ್ ಚುನಾವಣೆಯಲ್ಲಿ ವಿಕ್ಟೋರಿಯಾದ ವಿಲ್ಸ್ ಕ್ಷೇತ್ರಕ್ಕೆ ಲಿಬರಲ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಈ ಬಗ್ಗೆ ಶಿಲ್ಪಾ ಅವರು ಪ್ರತಿಕ್ರಿಯಿಸಿದ್ದು, "20 ವರ್ಷಗಳಿಂದ ಆಸ್ಟ್ರೇಲಿಯಾದ ಲಿಬರಲ್ ಪಾರ್ಟಿಯಲ್ಲಿ ಪತಿ ದಯಾನಂದ ಹೆಗ್ಡೆ ಹಾಗೂ ಮನೆಯವರ ಸಹಕಾರದಿಂದ ಸಕ್ರಿಯಾಗಿದ್ದು, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ನೇತೃತ್ವದ ಲಿಬರಲ್ ಪಾರ್ಟಿಯಿಂದ ವಿಕ್ಟೋರಿಯಾ ರಾಜ್ಯ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದು ಸಂತೋಷವಾಗಿದೆ" ಎಂದಿದ್ದಾರೆ.