ಮಂಗಳೂರು, ಫೆ.18 (DaijiworldNews/PY): ಕರ್ನಾಟಕ ಬ್ಯಾಂಕ್ನ ವತಿಯಿಂದ ಸುಮಾರು 1.10 ಕೋಟಿ.ರೂ ವೆಚ್ಚದಲ್ಲಿ ನಿರ್ಮಾಣವಾದ ಹೂದೋಟ, ತಡೆಬೇಲಿ ನಿರ್ಮಾಣ ಯೋಜನೆಯನ್ನು ಫೆ.18ರ ಗುರುವಾರದಂದು ಬ್ಯಾಂಕ್ನ ಅಧ್ಯಕ್ಷ ಪಿ.ಜಯರಾಮ ಭಟ್ ಉದ್ಘಾಟಿಸಿದರು.





























ಬಳಿಕ ಮಾತನಾಡಿದ ಅವರು, "ಇದು ಸಿಎಸ್ಆರ್ ಚಟುವಟಿಕೆಯಡಿಯಲ್ಲಿ ನಿರ್ಮಾಣವಾದ ಒಂದು ಕನಸಿನ ಯೋಜನೆಯಾಗಿದೆ. ಇದು ನಗರದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಉದ್ಯಾನವನ್ನು ನಿರ್ವಹಿಸಲು ಕರ್ನಾಟಕ ಬ್ಯಾಂಕ್ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ನಮ್ಮ ಬ್ಯಾಂಕ್ನ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಯಿಂದ ನಾವು ತೃಪ್ತರಾಗಿದ್ದೇವೆ. ಮಹಾವೀರ ವೃತ್ತದಲ್ಲಿ ನಿರ್ಮಾಣವಾಗಿರುವ ವೃತ್ತವನ್ನು ಪುನರ್ ನವೀಕರಿಸಲು ಯೋಜನೆ ಮಾಡಲಾಗುವುದು" ಎಂದರು.
ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ ಅವರು ಸ್ವಾಗತಿಸಿ ಬಳಿಕ ಮಾತನಾಡಿದ ಅವರು, "ನಾವು ಸಾರ್ವಜನಿಕ ಸುರಕ್ಷತೆಗಾಗಿ ನಿರ್ಮಿಸಿದ್ದೇವೆ. ರಸ್ತೆ ದಾಟುವ ಸಂದರ್ಭ ಹಲವಾರು ಜೀವಗಳು ಬಲಿಯಾಗಿವೆ. ಹಾಗಾಗಿ ನಾವು ಎನ್ಎಚ್ಎಐ ಯೋಜನಾ ನಿರ್ದೇಶಕರನ್ನು ಸಂಪರ್ಕಿಸಿದ ನಂತರ ಈ ಕ್ರಮವನ್ನು ಕೈಗೆತ್ತಿಕೊಂಡೆವು. ಅಲ್ಲದೇ ಮಹಾವೀರ ವೃತ್ತದಲ್ಲಿ ನಿರ್ಮಿಸಲಾಗಿರುವ ವೃತ್ತವನ್ನು ಪುನರ್ ನವೀಕರಿಸುವ ಉದ್ದೇಶವನ್ನು ಹೊಂದಿದ್ದೇವೆ" ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, "ಸಾರ್ವಜನಿಕ ಸುರಕ್ಷತೆ ಹಾಗೂ ನಗರದ ಸೌಂದರ್ಯ ಹೆಚ್ಚಿಸುವ ಸಲುವಾಗು ಕರ್ನಾಟಕ ಬ್ಯಾಂಕ್ ಕೈಗೊಂಡ ಉಪಕ್ರಮವನ್ನು ನಾನು ಪ್ರಶಂಸಿಸುತ್ತೇನೆ. ಈ ಪ್ರದೇಶದಲ್ಲಿ ನೀರಿನ ಸಂಪರ್ಕವನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು ಎನ್ನುವ ಭರವಸೆಯನ್ನು ನೀಡುತ್ತೇನೆ. ಇದರಿಂದ ಹೂದೋಟಕ್ಕೆ ನೀರಿನ ವ್ಯವಸ್ಥೆಯಾಗಲಿದೆ" ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, "ಕರ್ನಾಟಕ ಬ್ಯಾಂಕ್ ತಮ್ಮ ಸಾಮಾಜಿಕ ಕಾಳಜಿ ಹಾಗೂ ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡಿದೆ. ಮಂಗಳೂರಿನಲ್ಲಿ ಕಾರ್ಪೊರೇಟ್ಗಳ ಸಿಎಸ್ಆರ್ ಚಟುವಟಿಕೆಗಳ ಅಡಿಯಲ್ಲಿ ಹೆಚ್ಚಿನ ಸಾರ್ವಜನಿಕ ಸುರಕ್ಷತಾ ಯೋಜನೆಗಳು ಬರಬೇಕು" ಎಂದು ತಿಳಿಸಿದರು.
ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀ ಪ್ರಸಾದ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮೀಜಾರು, ಎನ್ಎಚ್ಎಐ ಯೋಜನಾ ನಿರ್ದೇಶಕ ಶಿಶು ಮೋಹನ್, ಡಿಸಿಪಿ ವಿನಯ ಗಾಂವ್ಕರ್, ಎಸಿಪಿ ಎಂ.ಎ.ನಟರಾಜನ್, ಸಿಇಎ ಬಾಲಚಂದ್ರ ವೈ.ವಿ ಹಾಗೂ ಬ್ಯಾಂಕ್ನ ಜಿ.ಎಂ.ಮಂಜುನಾಥ ಭಟ್ ಉಪಸ್ಥಿತರಿದ್ದರು.