ಉಳ್ಳಾಲ, ಫೆ.18 (DaijiworldNews/PY): "ತಲಪಾಡಿ ಟೋಲ್ ಸಿಬ್ಬಂದಿ ಸ್ಥಳೀಯರ ಮೇಲೆ ನಡೆದುಕೊಳ್ಳುವ ರೀತಿ ಅತಿರೇಕವಾಗುತ್ತಿದ್ದು ಅವರು ಗೂಂಡಾಗಿರಿ ನಿಲ್ಲಿಸದಿದ್ದರೆ ಗೆರಿಲ್ಲಾ ಯುದ್ಧದ ಶೈಲಿಯಲ್ಲಿ ಬಡಿದು ಬುದ್ಧಿ ಕಲಿಸಬೇಕಾದೀತು" ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಯ ನಾಯ್ಕ್ ಎಚ್ಚರಿಸಿದರು.














ಫಾಸ್ಟ್ ಟ್ಯಾಗ್ ಕಡ್ಡಾಯ, ಫಾಸ್ಟ್ ಟ್ಯಾಗ್ ರಹಿತ ಸಂಚಾರಿಗಳಿಗೆ ದುಪ್ಪಟ್ಟು ದರ ವಸೂಲಿ, ಸ್ಥಳೀಯರಿಗೆ ಟೋಲ್ ಫ್ರೀ ಸಂಚಾರ ರದ್ದು ಹಾಗೂ ತಲಪಾಡಿ ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ಗಳು ಮೇಲಿನ ತಲಪಾಡಿ ತನಕ ಸಂಚರಿಸಬೇಕು ಅಥವಾ ಸರಕಾರಿ ಬಸ್ ವ್ಯವಸ್ಥೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗಡಿನಾಡ ರಕ್ಷಣಾ ವೇದಿಕೆ ಹಾಗೂ ತಲಪಾಡಿಯ ಸ್ಥಳೀಯರು ರಾಜಕೀಯ ರಹಿತವಾಗಿ ಗುರುವಾರ ತಲಪಾಡಿ ಟೋಲ್ ಪ್ಲಾಝಾ ಎದುರು ನಡೆಸಿದ ಪ್ರತಿಭಟನೆ ಸಭೆಯಲ್ಲಿ ಅವರು ಟೋಲ್ ಸಿಬ್ಬಂದಿ ವಿರುದ್ಧ ಹರಿತವಾದ ಮಾತಿನಲ್ಲಿಯೇ ಎಚ್ಚರಿಕೆ ಕೊಟ್ಟರು.
"ಕೆಲವು ಮಂದಿಯ ಪಿತೂರಿಯಿಂದಾಗಿ ಇಲ್ಲಿ ಟೋಲ್ಗೇಟ್ ಆರಂಭವಾಗಿದೆ. ಇಲ್ಲಿ ಆಂಧ್ರದ ಸಿಬ್ಬಂದಿಯ ಜೊತೆ ಸ್ಥಳೀಯರು ಸೇರಿಕೊಂಡು ತಲಪಾಡಿಯ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸ್ಥಳೀಯ ಟೋಲ್ ಸಿಬ್ಬಂದಿ ಸ್ಥಳೀಯರ ಜೊತೆಗೊಂದು ಟೋಲ್ ಅಧಿಕಾರಿಗಳ ಜೊತೆಗೆ ಒಂದು ನಾಟಕವಾಡುತ್ತಿದ್ದು ಸ್ಥಳೀಯರ ಜೊತೆಗೆ ಟೋಲ್ ಸಿಬ್ಬಂದಿಯ ವರ್ತನೆ ಅತಿರೇಕವಾದರೆ ಬಡಿದು ಬುದ್ಧಿ ಕಲಿಸುತ್ತೇವೆ" ಎಂದರು.
"ಟೋಲ್ ಸಿಬ್ಬಂದಿ ದೂರದ ಆಂಧ್ರದವರು. ಅವರಿಗೆ ಇಲ್ಲಿನ ಜನರ ಮನಸ್ಥಿತಿ ಅರ್ಥವಾಗದು. ಅಷ್ಟಕ್ಕೂ ಇದು ಬ್ಲಾಕ್ ಲಿಸ್ಟ್ನಲ್ಲಿ ಇರುವ ಸಂಸ್ಥೆ, ಇವರು ನಿಯಮದಂತೆ ಸರ್ವಿಸ್ ರಸ್ತೆ ನಿರ್ಮಿಸಿ ಕೊಟ್ಟಿಲ್ಲ. ಸ್ಥಳೀಯರಿಗೆ ಇಲ್ಲಿನ ಸ್ಥಳೀಯ ಸಿಬ್ಬಂದಿ ಕೂಡಾ ಸಹಕರಿಸುತ್ತಿಲ್ಲ" ಎಂದು ದೂರಿದರು.
"ತಲಪಾಡಿಯ ಅಕ್ಕ ಪಕ್ಕದ ಎರಡು ಕೀ. ಮೀ ಒಳಗೆ ಇರುವವರನ್ನು ಇಬ್ಭಾಗ ಮಾಡಿ ಹಣ ತೆಗೆದುಕೊಳ್ಳುವುದು ಸರಿ ಅಲ್ಲ, ಟೋಲ್ ಸಿಬ್ಬಂದಿ ನಮ್ಮನ್ನು ದೂರ ಮಾಡಲು ನೋಡುವುದು ಬೇಡ. ಸ್ಥಳೀಯವಾಗಿ ಯಾವ ವ್ಯವಸ್ಥೆ ಈ ಮೊದಲು ಇತ್ತು, ಮುಂದೆಯೂ ಅದೇ ಪ್ರಕಾರ ನಡೆಯಬೇಕು. ಸ್ಥಳೀಯರ ಮೇಲೆ ಗೂಂಡಾಗಿರಿ ಮಾಡುವುದು ಬೇಡ, ಇಲ್ಲಿನ ಜನರಿಗೆ ಮಸಿ ಬಳಿಯುವ ಪ್ರಯತ್ನವೂ ಬೇಡ. ನಮ್ಮ ಮರ್ಯಾದೆ ತೆಗೆಯಲು ಮುಂದಾಗೋದು ಬೇಡ. ಇಲ್ಲಿ ಹಣ ಕೊಡಲು ಶಕ್ತಿ ಇಲ್ಲದವರು ಯಾರೂ ಇಲ್ಲ, ಆದರೆ ಸ್ಥಳೀಯರಿಗೆ ನ್ಯಾಯ ಸಿಗಬೇಕು ಎಂಬ ಹೋರಾಟ ನಮ್ಮದು" ಎಂದರು.
"ತಲಪಾಡಿಯಿಂದ ಮಂಗಳೂರಿಗೆ ಕಟೀಲ್, ಬಿಟಿಸಿ ಮೊದಲಾದ ಖಾಸಗಿ ಬಸ್ ಸಂಚರಿಸುತ್ತಿದ್ದು ಅವರಿಗೆ ನಿರ್ವಹಣೆ ಸಾಧ್ಯವಾಗುವುದಾದರೆ ಇತರ ಬಸ್ನವರಿಗೆ ಮೇಲಿನ ತಲಪಾಡಿಗೆ ಹೋಗಲು ಏನು ಕಷ್ಟ, ಬಸ್ಸ್ಟಾಂಡ್ ಇಲ್ಲದ ಟೋಲ್ ಪ್ಲಾಝಾ ಬಳಿ ಬಸ್ ನಿಲ್ಲಿಸೋದು ಬೇಡ, ಅದು ತಪ್ಪು. ಅಧಿಕಾರಿಗಳು ಪ್ರಶ್ನಿಸಬೇಕು, ಅವರ ಜೊತೆಗೆ ಮಾತನಾಡುತ್ತೇವೆ. ಪೊಲೀಸ್ ನವರು ಜನರಿಗೆ ರಕ್ಷಣೆ ಕೊಡಬೇಕು ಹೊರತು ಕೇವಲ ಟೋಲ್ ಸಿಬ್ಬಂದಿಗಲ್ಲ" ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಸದಸ್ಯೆ ಸುರೇಖಾ ಚಂದ್ರಹಾಸ್ ಮಾತನಾಡಿ, "ಸ್ಥಳೀಯರು ಬಿಟ್ಟುಕೊಟ್ಟ ಜಾಗದಲ್ಲಿ ಟೋಲ್ ಗೇಟ್ ನಿರ್ಮಿಸಲಾಗಿದೆ. ಆದರೆ ಈಗ ಸ್ಥಳೀಯರು ಟೋಲ್ ಶುಲ್ಕ ಕಟ್ಟಿ ಸಂಚರಿಸಬೇಕಾದ ದುಸ್ಥಿತಿ ಬಂದಿದೆ. ನಾವು ಆ ದಿನಗಳಲ್ಲಿ ತಡೆದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಹಾಗೆಯೇ ತಾಲೂಕು ಪಂಚಾಯಿತಿ ಸಭೆಯಲ್ಲಿ ಭಾಗವಹಿಸಲು ಕರೆದರೆ ಟೋಲ್ ಅಧಿಕಾರಿಗಳಿಗೆ ಭಾಗವಹಿಸುವುದೇ ಇಲ್ಲ" ಎಂದರು.
ಈ ನಡುವೆ ಟೋಲ್ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆ ನಡೆಯುತ್ತಿದ್ದಾಗ ಒಬ್ಬ ಕಾರು ಸವಾರ ಫಾಸ್ಟ್ ಟ್ಯಾಗ್ ಹೊಂದಿರಲಿಲ್ಲ ಎಂಬ ಕಾರಣಕ್ಕೆ ದುಪ್ಪಟ್ಟು ದರ ವಿಧಿಸಿದ್ದನ್ನು ಪ್ರತಿಭಟನಾಕಾರರು ವಿರೋಧಿಸಿದರು. ಅದರ ಮಧ್ಯೆ ತಲಪಾಡಿಯ ಖಾಸಗಿ ಬಸ್ ಒಂದನ್ನು ಮೇಲಿನ ತಲಪಾಡಿಗೆ ಹೋಗುವಂತೆ ಟೋಲ್ ಗೇಟ್ ದಾಟಿಸಿದ್ದಾರೆ ಅದಕ್ಕೆ ಸಿಬ್ಬಂದಿ ಶಿವು ಎಂಬಾತ ಪ್ರತಿಭಟಿಸಿದ್ದು ಮಾತಿನ ಚಕಮಕಿ, ನೂಗ್ಗಲು ನಡೆಯಿತು.
ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದಿಕ್ ತಲಪಾಡಿ ಮಾತನಾಡಿ, "ಫೆ. 19ರ ಶುಕ್ರವಾರ ಸಂಜೆ ತನಕ ಅವಕಾಶ ಕೊಡುತ್ತಿದ್ದೇವೆ. ಅದರೊಳಗೆ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಈ ಹಿಂದಿನ ವ್ಯವಸ್ಥೆಯೇ ಮುಂದುವರಿಯಬೇಕು, ಸದ್ಯ ಗಾಂಧಿ ಮಾರ್ಗದಲ್ಲಿ ಪ್ರತಿಭಟನೆ ಸಾಗುತ್ತಿದೆ. ನಮಗೆ ಸುಭಾಷ್ಚಂದ್ರ ಭೋಸರ ದಾರಿಯಲ್ಲಿ ಹೋಗಲು ಗೊತ್ತು, ಅದಕ್ಕೆ ಅವಕಾಶ ಕೊಡಬೇಡಿ. ಲೋಪಗಳನ್ನು ಸರಿಪಡಿಸಿ, ತಪ್ಪಿದಲ್ಲಿ ಉಗ್ರ ಹೋರಾಟ ಮುಂದುವರಿಸಲಿದ್ದೇವೆ" ಎಂದು ಎಚ್ಚರಿಸಿದರು.
ತಾಲೂಕು ಪಂಚಾಯಿತಿ ಸದಸ್ಯ ಸಿದ್ದೀಕ್ ಕೊಳಂಗರೆ, ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯ ವೈಭವ್ ಶೆಟ್ಟಿ ತಲಪಾಡಿ, ವಿನು ಶೆಟ್ಟಿ ತಲಪಾಡಿ, ಫ್ಲೇವಿ ಡಿಸೋಜ, ವಾಣಿ ಪೂಜಾರಿ, ನಝೀಮ, ಗೋಪಾಲ ತಚ್ಚಣಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.