ಪುತ್ತೂರು, ಫೆ.18 (DaijiworldNews/PY): ಬ್ಯಾಂಕ್ ಅಡಮಾನ ಸಾಲಕ್ಕೆ ಮನೆ ಮುಟ್ಟಗೋಲು ಹಾಕಲು ಬಂದ ರಾಷ್ಟ್ರೀಕೃತ ಬಾಂಕ್ನ ಸೀಸರ್ಗಳ ಸಮ್ಮುಖದಲ್ಲಿ ಮರ್ಯಾದೆಗೆ ಅಂಜಿ ಮನೆ ಮಾಲಕನ ಪತ್ನಿ ಡೆತ್ ನೋಟ್ ಬರೆದು ಮನೆ ಕೊಠಡಿಯಲ್ಲಿನ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಫೆ.18ರಂದು ಪುತ್ತೂರಿನ ಹಾರಾಡಿ ರೈಲ್ವೇ ರಸ್ತೆಯ ಬಳಿ ನಡೆದಿದೆ.







ಪುತ್ತೂರಿನ ಉದ್ಯಮಿ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆ ನಿವಾಸಿ ರಘುವೀರ್ ಪ್ರಭು ಅವರ ಪತ್ನಿ ಪ್ರಾರ್ಥನಾ ಪ್ರಭು (52 ) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.
"ನನ್ನ ಸಾವಿಗೆ ಕೆನರಾ ಬ್ಯಾಂಕ್ನವರ ಉಪದ್ರವ, ಮೆಂಟಲ್ ಟಾರ್ಚರ್ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಡೆತ್ ನೋಟ್ ಬರೆದಿಟ್ಟು ಅವರು ಮನೆಯ ಕೊಠಡಿಯೊಂದರಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್ನಿಂದ ಸಾಲವಿದ್ದು ಸಾಲ ಮರುಪಾವತಿ ಮಾಡಿಲ್ಲ ಎಂದು ಬ್ಯಾಂಕ್ ನೋಟೀಸ್ ಬಂದಿತ್ತು. ಅದಾದ ನಂತರ ಕೋರ್ಟ್ ನೋಟೀಸ್ ಮೂಲಕ ಮನೆ ಮುಟ್ಟುಗೋಲು ಹಾಕಲು ಫೆ.18ರಂದು ಬ್ಯಾಂಕ್ ಸೀಸರ್ ಜೊತೆ ಬಂದಾಗ ಮನೆ ಮಂದಿ ಆತಂಕ್ಕಕೊಳಾಗಿದ್ದರು. ಈ ನಡುವೆ ಪ್ರಾರ್ಥನಾ ಪ್ರಭು ಅವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಘುವೀರ ಪ್ರಭು ಅವರು ಕೆನರಾ ಬ್ಯಾಂಕ್ನಲ್ಲಿ ಹೊಂದಿದ್ದ ಸಾಲದ ಬಾಬ್ತು ಮಂಗಳೂರಿನ ಕೆನರಾ ಬ್ಯಾಂಕ್ ಕೋರ್ಟು ಆದೇಶದೊಂದಿಗೆ ಮನೆ ಮುಟ್ಟುಗೋಲು ಹಾಕಲು ಫೆ. 18ರಂದು ಹಾರಾಡಿಯಲ್ಲಿರುವ ಮನೆಗೆ ಬಂದಿದ್ದರು. ಈ ವೇಳೆ ಮನೆಯಲ್ಲಿದ್ದ ರಘುವೀರ ಪ್ರಭು ಅವರ ಪತ್ನಿ ಪ್ರಾರ್ಥನಾ ಮತ್ತು ಇಬ್ಬರು ಮಕ್ಕಳು ಆತಂಕಗೊಂಡಿದ್ದರು. ರಘುವೀರ ಪ್ರಭು ಅವರ ಮಕ್ಕಳು ಪ್ರಕರಣ ನ್ಯಾಯಾಲಯದಲ್ಲಿರುವಾಗ ಮುಟ್ಟುಗೋಲು ಹಾಕದಂತೆ ಬ್ಯಾಂಕ್ ಹಾಗೂ ಕೋರ್ಟು ಕಮೀಷನರ್ ಅಧಿಕಾರಿಗಳೊಂದಿಗೆ ವಿನಂತಿಸಿದ್ದಾರೆ ಎನ್ನಲಾಗಿದೆ. ಇದನ್ನು ತಿರಸ್ಕರಿಸಿದ ಬ್ಯಾಂಕ್ನವರು ಮನೆಯ ಹಿಂಬದಿಯ ಬೀಗವನ್ನು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ. ಇದೇ ಕ್ಷಣದಲ್ಲಿ ಮನೆಯೊಳಗಿದ್ದ ಪ್ರಾರ್ಥನಾ ಪ್ರಭು ಅವರು ಮನೆಯೊಳಗಿನಿಂದ ಲಾಕ್ ಮಾಡಿ ಕೊಠಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬ್ಯಾಂಕ್ ಮುಟ್ಟುಗೋಲಿಗೆ ಭದ್ರತೆ ಒದಗಿಸಲು ಬಂದ ಪೊಲೀಸರು ನೇಣು ಬಿಗಿದ ಸ್ಥಿತಿಯಲ್ಲಿದ್ದ ಪ್ರಾರ್ಥನಾ ಪ್ರಭು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು. ಬಳಿಕದ ಬೆಳವಣಿಗೆಯಲ್ಲಿ ಬ್ಯಾಂಕ್ನವರು ಮನೆ ಮುಟ್ಟುಗೋಲು ಮಾಡಲೆಂದು ಮನೆಯ ಹಿಂಬದಿಯ ಬಾಗಿಲಿಗೆ ಬೀಗ ಹಾಕಿ ಸೀಲ್ ಹಾಕಿ, ಮನೆಯ ಆವರಣದ ಗೇಟ್ ಬಳಿಯೂ ಮನೆ ಮುಟ್ಟುಗೋಲು ಮಾಡಲಾಗಿದೆ ಎಂಬ ಬ್ಯಾನರ್ ಹಿಡಿದು ಪೊಟೋ ಕ್ಲಿಕಿಸಿದರು.
ಇದೇ ಸಂದರ್ಭ ಸ್ಥಳಕ್ಕೆ ಆಗಮಿಸಿದ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು, "ಜೀವ ಹೋದ ಮೇಲೂ ಮನೆ ಮುಟ್ಟುಗೋಲು ಮಾಡುವುದು ಸರಿಯಲ್ಲ. ಮಾನವೀಯತೆ ಇರಲಿ" ಎಂದರು.
ಕೊನೆಗೆ ಮನೆಯ ಮಾಲಕ ರಘುವೀರ್ ಪ್ರಭು ಬಂದು ಸಾಲದ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ನಡುವೆ ಸಾಲಗಾರನಲ್ಲದ ನನ್ನ ಮಕ್ಕಳಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಲು ಬಂದಿರುವುದು ಕಾನೂನು ಬಾಹಿರವಾಗಿದೆ ಎಂದಾಗ ಬ್ಯಾಂಕ್ ಅಧಿಕಾರಿ ಬಂದು ಮನೆ ಮುಟ್ಟುಗೋಲು ಮಾಡಿದ ಕೀ ಅನ್ನು ರಘುವೀರ್ ಅವರ ಮಕ್ಕಳಿಗೆ ಹಸ್ತಾಂತರ ಮಾಡಿ ತೆರಳಿದರು.
ಘಟನೆಯ ಕುರಿತು ಮೃತರ ಪತಿ ರಘುವೀರ್ ಪ್ರಭು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821