ಉಪ್ಪಳ, ಫೆ. 18 (DaijiworldNews/SM): ಪೈವಳಿಕೆಯ ಬೋಳಂಗಳದಲ್ಲಿ ಸ್ಥಾಪಿಸಿರುವ ಸೋಲಾರ್ ಪಾರ್ಕ್ ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 19ರಂದು ಆನ್ ಲೈನ್ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ.

ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಗುರಿಯೊಂದಿಗೆ ಆರಂಭಿಸಿರುವ ಸೋಲಾರ್ ಪಾರ್ಕ್ ನ ಎರಡನೇ ಯೋಜನೆಯಾದ ಪೈವಳಿಕೆಯ ಕೊಮ್ಮಂಗಳದಲ್ಲಿ ಸುಮಾರು 250 ಎಕರೆ ಸ್ಥಳದಲ್ಲಿ 50 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸೋಲಾರ್ ಪಾರ್ಕ್ ನಿರ್ಮಿಸಲಾಗಿದೆ. ಜವಾಹರ್ ಲಾಲ್ ನೆಹರೂ ನ್ಯಾಷನಲ್ ಸೋಲಾರ್ ಮಿಷನ್ ನಡಿ ಈ ಯೋಜನೆ ಜಾರಿಗೊಳಿಸಲಾಗಿದೆ.
ಸಂಜೆ 3 ಗಂಟೆಗೆ ಪೈವಳಿಕೆ ಸಮೀಪದ ಬೋಳಂಗಳದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಆರ್. ಕೆ. ಸಿಂಗ್, ಹರ್ದಿಫ್ ಸಿಂಗ್ ಪುರಿಯ, ಕೇರಳ ವಿದ್ಯುತ್ ಸಚಿವ ಎಂ. ಎಂ. ಮಣಿ, ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್, ಶಾಸಕ ಎಂ.ಸಿ. ಕಮರುದ್ದೀನ್ ಮೊದಲಾದವರು ಉಪಸ್ಥಿತರಿರುವರು.