ಮೊದಲೇ ಹೇಳಿಕೇಳಿ ಕೋಮುಸೂಕ್ಷ್ಮ ಪ್ರದೇಶ ಮಂಗಳೂರಿನಲ್ಲಿ ಇದೇ ಸೆಪ್ಟಂಬರ್ ೭ ರಂದು ಬಿಜೆಪಿ ಯುವ ಮೋರ್ಚಾ ನಡೆಸಲು ಉದ್ದೇಶಿಸಿರುವ ಬೈಕ್ ರ್ಯಾಲಿಗೆ ಮೊದಲ ಶಾಕ್ ಎದುರಾಗಿದೆ. ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತರ ಮಂಗಳೂರು ಚಲೋ ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಯಾವುದೇ ಕಾರಣಕ್ಕೂ ಬೈಕ್ ರ್ಯಾಲಿ ಕಮೀಷನರೇಟ್ ವ್ಯಾಪ್ತಿ ಪ್ರವೇಶಿಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಪೊಲೀಸ್ ಆಯುಕ್ತರು ಖಡಕ್ಕಾಗಿ ಹೇಳಿದ್ದಾರೆ. ನಾಲ್ಕು ದಿನಗಳ ಹಿಂದೆ ಬಿಜೆಪಿ ಮುಖಂಡರು ಕೇಳಿರುವ ಬೈಕ್ ರ್ಯಾಲಿ ಅನುಮತಿಯನ್ನು ಉನ್ನತ ಮಟ್ಟಿನ ಇಲಾಖಾಧಿಕಾರಿಗಳ ಸಭೆ ನಂತರ ನಿರಾಕರಿಸಲಾಗಿದೆ. ಕರಾವಳಿಯ ಸೌಹಾರ್ದತೆ ಕಾಪಾಡೋ ನಿಟ್ಟಿನಲ್ಲಿ ಬೈಕ್ ರ್ಯಾಲಿಯನ್ನು ತಡೆಯುವುದು ಅನಿವಾರ್ಯ ಅನ್ನೋದನ್ನು ಪೊಲೀಸ್ ಆಯುಕ್ತರೇ ತಿಳಿಸಿದ್ದಾರೆ.
ಇನ್ನೂ ಕೆಲ ಹಿಂದೂ ನಾಯಕರ ಹತ್ಯೆ ಹಿಂದೆ ಪಿಎಫ್ಐ, ಕೆಎಫ್ಡಿ ಸಂಘಟನೆ ಇರೋದರಿಂದ ಇದನ್ನು ನಿಷೇಧಿಸಬೇಕು, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅನ್ನೋ ಬೇಡಿಕೆಯೊಂದಿಗೆ ಮಂಗಳೂರು ಚಲೋ ಆಯೋಜಿಸಲಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹಿಡಿದು ಹಲವು ಜಿಲ್ಲೆಗಳಿಂದ ರ್ಯಾಲಿ ಹೊರಟು ಬರೋ ಕಾರ್ಯಕರ್ತರು ಮಂಗಳೂರು ನಗರದಲ್ಲಿ ಸಮಾರೋಪ ನಡೆಸಲಿದ್ದಾರೆ ಎಂದು ಬಿಜೆಪಿ ವರಿಷ್ಠರು ಹೇಳಿಕೊಂಡಿದ್ದರು. ಮೊದಲೇ ಕಾಂಗ್ರೆಸ್ ಪ್ರಾಬಲ್ಯದ ಜಿಲ್ಲೆಯನ್ನೇ ಟಾರ್ಗೆಟ್ ಮಾಡಿಕೊಂಡಿರೋ ಬಿಜೆಪಿಗೆ ಮಂಗಳೂರು ಚಲೋ ಮುಂದಿನ ಚುನಾವಣೆಗೆ ಪ್ರಮುಖ ಅಸ್ತ್ರವಾಗಿತ್ತು. ಆದರೆ ಇದೀಗ ಬೈಕ್ ರ್ಯಾಲಿ ತಡೆಯೋದರ ಮೂಲಕ ಬಿಜೆಪಿ ಪಕ್ಷದ ಮೇಲೆ ಸರಕಾರ ಸವಾರಿ ಮಾಡಹೊರಟಿದೆ.
ಒಟ್ಟಿನಲ್ಲಿ ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಿಕೊಂಡಿರೋ ಮಂಗಳೂರಿನಲ್ಲಿ ಬೈಕ್ ರ್ಯಾಲಿ ನಡೆಸೋ ಮೂಲಕ ಹಿಂದು ಮತಗಳನ್ನು ಸೆಳೆಯುವ ಬಿಜೆಪಿ ಪ್ರಯತ್ನಕ್ಕೆ ಸರಕಾರ ಕೊಳ್ಳಿ ಇಡಲು ಮುಂದಾಗಿದೆ. ಅಲ್ಲದೇ ಬಿಜೆಪಿ ಪ್ರತಿಭಟನೆಯನ್ನು ತಂತ್ರಗಾರಿಕೆ ಮೂಲಕ ಹತ್ತಿಕ್ಕೋದಕ್ಕಾಗಿ ನೂತನ ಗೃಹಸಚಿವರಿಗೆ ಖುದ್ದು ಮುಖ್ಯಮಂತ್ರಿಗಳೇ ಸೂಚನೆ ಬೇರೆ ನೀಡಿದ್ದಾರೆ. ಇದೆಲ್ಲವೂ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಹೊಸ ಗುದ್ದಾಟಕ್ಕೆ ರಾಜ್ಯ ಮಟ್ಟದಲ್ಲಿ ಇನ್ನೊಂದು ದೊಡ್ಡ ಮಟ್ಟಿನ ಅವಾಂತರ ಆಗೋ ಸಾಧ್ಯತೆಯನ್ನು ಒತ್ತಿ ಹೇಳಿದೆ.
ವರದಿ: ಇರ್ಷಾದ್ ಕಿನ್ನಿಗೋಳಿ