ಕಾಸರಗೋಡು, ಜು 13: ಜಿಲ್ಲೆಯಲ್ಲಿ ಮಳೆ ಮತ್ತೆ ಬಿರುಸುಗೊಂಡಿದೆ. ಗಾಳಿ ಮಳೆಗೆ ಉಪ್ಪಳ ಹಾಗೂ ಕುಂಬಳೆ ಸೇರಿದಂತೆ ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಉಪ್ಪಳ ಶಾರದಾ ನಗರದಲ್ಲಿ ಮರಬಿದ್ದು 15 ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.
ಟ್ರಾನ್ಸ್ ಫಾರ್ಮರ್ ಮುರಿದು ಬಿದ್ದಿದೆ. ಇಂದು ಮಧ್ಯಾಹ್ನ ಗಾಳಿ ಮಳೆಗೆ ಬೃಹತ್ ಮರವೊಂದು ಬಿದ್ದಿದ್ದು, ಇದರಿಂದ ವಿದ್ಯುತ್ ಟ್ರಾನ್ಸ್ ಫಾರ್ಮರ್, ಕಂಬಗಳಿಗೆ ಹಾನಿಯಾಗಿದೆ. ರಸ್ತೆಗೆ ಮರ ಬಿದ್ದ ಪರಿಣಾಮ ವಾಹನ ಸಂಚಾರವೂ ಅಸ್ತವ್ಯಸ್ತಗೊಂಡಿದ್ದು ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ವಿದ್ಯುತ್ ಇಲಾಖಾ ಸಿಬ್ಬಂದಿಗಳು ದುರಸ್ಥಿ ಕಾರ್ಯ ನಡೆಸಿದ್ದಾರೆ. ಇನ್ನು ಕುಂಬಳೆಯ ಬಂಬ್ರಾಣದಲ್ಲಿ ಮರ ಬಿದ್ದು ವಿದ್ಯುತ್ ಕಂಬ ಧರಾಶಾಹಿಯಾದ ಘಟನೆ ನಡೆದಿದೆ. ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಅಸ್ತವ್ಯಸ್ಥಗೊಂಡಿದ್ದು ಜನಸಾಮಾನ್ಯರು ಪರದಾಡುವಂತಾಗಿದೆ.