ಉಡುಪಿ, ಫೆ.19 (DaijiworldNews/MB) : ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಬುಧವಾರ ಫೆಬ್ರವರಿ 17 ನಡೆದ ಅಕ್ಕಿ ಮುಹೂರ್ತದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ, ಪಲಿಮಾರು ಮಠದ ಹಿರಿಯ ಶ್ರೀಪಾದರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ಶ್ರೀ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಎಲ್ಲಾ ಶ್ರೀಪಾದರುಗಳಿಗೆ ಕೃಷ್ಣಾಪುರ ಮಠದಿಂದ ಗೌರವಾರ್ಪಣೆ ನಡೆಯಿತು.





ಸಭೆಯಲ್ಲಿ ಮಾತನಾಡಿದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ''ಉಪಸ್ಥಿತರಿರುವ ಎಲ್ಲಾ ಶ್ರೀಪಾದರ ಸಹಕಾರದ ಮಾತು, ಹಾಗೂ ಭಕ್ತರ ಸಹಕಾರದಿಂದ ಪರ್ಯಾಯವನ್ನು ನಡೆಸುವ ಹುರುಪು ಬಂದಿದೆ'' ಎಂದು ಹರ್ಷ ವ್ಯಕ್ತಪಡಿಸಿದರು. ದೇವರಿಗೆ ಪ್ರೀತಿ ಆಗುವ ಯಾವುದೇ ಕಾರ್ಯಗಳನ್ನು ಹಿಂದಿನ ಪರ್ಯಾಯಗಳಲ್ಲಿ ನಡೆಸಿದ್ದರೆ, ಅದನ್ನು ತಾವೂ ಕೂಡಾ ಮುಂದುವರೆಸುವುದಾಗಿ ಹೇಳಿದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ಮಾತನಾಡಿ, ''ಭತ್ತ ಸೃಷ್ಠಿಯ ಸಂಕೇತ. ಭತ್ತದಿಂದ ಹೊಸ ಹುಟ್ಟೂ ಸಾಧ್ಯ. ಭತ್ತದ ಹೊಟ್ಟನ್ನು ಬೇರ್ಪಡಿಸಿ ಸಿಗುವ ಅಕ್ಕಿ ಮೋಕ್ಷದ ಸಂಕೇತ. ನಮ್ಮಜೀವನವೂಕೂಡಾಮೋಕ್ಷವನ್ನು ಪಡೆಯುವತ್ತ ಸಾಗಲಿ'' ಎಂದು ಆಶಿಸಿದರು. ''ಪಲಿಮಾರು ಹಿರಿಯ ಶ್ರೀಪಾದರು ಮಾತನಾಡುತ್ತಾ, ಕೃಷ್ಣಾಪುರ ಶ್ರೀಪಾದರು ದಾಖಲೆಯ ನಾಲ್ಕನೇ ಬಾರಿಗೆ ಪರ್ಯಾಯ ಪೀಠವನ್ನು ಏರಲಿದ್ದು, ಈ ಹಿಂದಿನ ಮೂರೂ ಪರ್ಯಾಯಗಳನ್ನು ಯಶಸ್ವಿಯಾಗಿ ಸಂಪ್ರದಾಯ ಬದ್ಧವಾಗಿ ಪೂರೈಸಿದ್ದಾರೆ. ವಿಶ್ವಪ್ರಿಯ ಪರ್ಯಾಯ ಮಾಡುವುದಕ್ಕಿಂತ ಕೃಷ್ಣಪ್ರಿಯ ಪರ್ಯಾಯ ನಡೆಸುವ ಮೂಲಕ ನಮಗೆಲ್ಲಾ ಪರ್ಯಾಯ ನಡೆಸುವಲ್ಲಿ ಮಾರ್ಗದರ್ಶಕರಾಗಿದ್ದಾರೆ. ಅನ್ನದಾನಕ್ಕೆ ಪ್ರಸಿದ್ಧವಾಗಿರುವ ಕೃಷ್ಣಮಠದಲ್ಲಿನ ಊಟ ಕೇವಲ ಅನ್ನವಾಗಿರದೆ, ಕೃಷ್ಣದೇವರ ನೈವೇದ್ಯ ಎಂಬ ಭಾವನೆಯಲ್ಲಿ ಭಕ್ತರು ಸ್ವೀಕಾರ ಮಾಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡಿರುವ ದೃಷ್ಟಾಂತಗಳಿ ಸಾಕಷ್ಟು ಇವೆ'' ಎಂದರು. ''ಕೃಷ್ಣ ಮುಖ್ಯಪ್ರಾಣರ, ಶ್ರೀ ವಾದಿರಾಜರಅನುಗ್ರಹದಿಂದ ಮುಂದಿನ ಪರ್ಯಾಯ ಸಾಂಗವಾಗಿ ನೆರವೇರಲಿ'' ಎಂದು ಆಶಿಸಿದರು.
ಮಠದ ವಿದ್ವಾಂಸರಾದ ಡಾ. ಗುರುರಾಜಾಚಾರ್ಯ ನಿಪ್ಪಾಣಿ ಇವರು ನಿರೂಪಿಸಿ ವಂದಿಸಿದರು. ಆಗಮಿಸಿದ್ದ ಎಲ್ಲಾ ಭಕ್ತಾದಿಗಳಿಗೆ ಕೃಷ್ಣಾಪುರ ಶ್ರೀಪಾದರು ಫಲ ಮಂತ್ರಾಕ್ಷತೆಕೊಡುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.