ಮಂಗಳೂರು, ಫೆ.19 (DaijiworldNews/MB) : ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ನ ಸುಂಕವನ್ನು ಹೆಚ್ಚಿಸುವ ಮೂಲಕ ಹಗಲು ದರೋಡೆಗೆ ತೊಡಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಆರೋಪಿಸಿದ್ದು "ಇತಿಹಾಸದಲ್ಲಿ, ಇಂಧನ ಬೆಲೆಗಳ ಈ ರೀತಿಯ ನಿರಂತರ ಹೆಚ್ಚಳಕ್ಕೆ ದೇಶ ಎಂದಿಗೂ ಸಾಕ್ಷಿಯಾಗಿಲ್ಲ" ಎಂದು ಹೇಳಿದರು.

ಫೆಬ್ರವರಿ 19 ರಂದು ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈ, "ಇಂಧನ ಬೆಲೆಗಳ ಹೆಚ್ಚಳವು ಅಗತ್ಯ ವಸ್ತುಗಳ ಬೆಲೆಗಳ ಗಗನಕ್ಕೇರಲು ಕಾರಣವಾಗಿದೆ. ಸಾರ್ವಜನಿಕರು ತೊಂದರೆಯಲ್ಲಿದ್ದಾರೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 145 ಡಾಲರ್ ಆಗಿದ್ದರೂ ಇಂಧನದ ಬೆಲೆಗಳು ಈ ರೀತಿ ಹೆಚ್ಚಾಗಲಿಲ್ಲ. ಎಲ್ಪಿಜಿ ಬೆಲೆಯಲ್ಲಿನ ಹೆಚ್ಚಳವು ಸಾರ್ವಜನಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬಿಜೆಪಿ ಸರ್ಕಾರಕ್ಕೆ ಸಾಮಾನ್ಯ ಜನರ ಬಗ್ಗೆ ಸಹಾನುಭೂತಿ ಇಲ್ಲ. ಬದಲಾಗಿ, ಅದು ಕೇವಲ ಕಾರ್ಪೊರೇಟ್ಗಳತ್ತ ಮಾತ್ರ ಒಲವು ತೋರುತ್ತಿದೆ'' ಎಂದು ದೂರಿದರು.
''ಸರ್ಕಾರ ದೇಶದ ಜನರನ್ನು ಮರುಳು ಮಾಡುತ್ತಿದೆ. ಕಚ್ಚಾ ತೈಲ ಬ್ಯಾರೆಲ್ಗೆ 40 ಡಾಲರ್ ವೆಚ್ಚದಲ್ಲಿ ಲಭ್ಯವಿದ್ದರೂ ಬಿಜೆಪಿ ನೇತೃತ್ವದ ಸರ್ಕಾರ ಇಂಧನದ ಬೆಲೆಯನ್ನು ಕಡಿಮೆ ಮಾಡಲು ವಿಫಲವಾಗಿದೆ. ಯುಪಿಎ ಅಧಿಕಾರದಲ್ಲಿದ್ದಾಗ, ಪೆಟ್ರೋಲ್ಗೆ ಅಬಕಾರಿ ಸುಂಕ 9 ರೂ ಮತ್ತು ಡೀಸೆಲ್ಗೆ 3 ರೂ. ಆಗಿತ್ತು. ಆದರೆ ಈಗ ಪೆಟ್ರೋಲ್ಗೆ ಅಬಕಾರಿ ಸುಂಕ 32.96 ರೂ. ಮತ್ತು ಡೀಸೆಲ್ 27 ರೂ. ಇದೆ. ಇಂಧನ ಬೆಲೆ ಏರಿಕೆಯು ಬಸ್ನಲ್ಲಿ ಪ್ರಯಾಣ ದರ ಏರಿಕೆಗೆ ಕಾರಣವಾಗುತ್ತದೆ. ಇದು ಮೀನುಗಾರಿಕೆ ವ್ಯವಹಾರ ಮತ್ತು ರೈತರಿಗೂ ಸಮಸ್ಯೆಯನ್ನು ಸೃಷ್ಟಿಸಿದೆ'' ಎಂದು ಆರೋಪಿಸಿದರು.
''ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ದೇಶದ ಪ್ರಗತಿಗೆ ಶ್ರಮಿಸಿದೆ'' ಎಂದು ಹೇಳಿದ ಅವರು, ''ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಜನರು ಯಾವುದೇ ಭಯವಿಲ್ಲದೆ ಸರ್ಕಾರವನ್ನು ಧೈರ್ಯದಿಂದ ಟೀಕಿಸುತ್ತಿದ್ದರು. ಆದರೆ, ಈಗ ಜನರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದರೆ, ಅವರನ್ನು ರಾಷ್ಟ್ರ ವಿರೋಧಿಗಳು ಎಂದು ಬ್ರಾಂಡ್ ಮಾಡಲಾಗುತ್ತದೆ. ಇತ್ತೀಚೆಗೆ, ತುಳು ಚಲನಚಿತ್ರ ನಟರೊಬ್ಬರು ಇಂಧನ ಬೆಲೆ ಏರಿಕೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಟ್ರೋಲ್ ಮಾಡಲಾಗಿತ್ತು. ಮತ್ತೊಬ್ಬ ತುಳು ನಟನಿಗೆ ಸಂಘ ಪರಿವಾರದ ಕಾರ್ಯಕರ್ತರು ಬೆದರಿಕೆ ಹಾಕಿದ್ದರು'' ಎಂದು ಹೇಳಿದರು.
''ಯುಪಿಎ ಸರ್ಕಾರವು ಜನರ ನೋವನ್ನು ಅರ್ಥಮಾಡಿಕೊಂಡಿತ್ತು. ಪ್ರಸ್ತುತ ಸರ್ಕಾರ ಶ್ರೀಮಂತ ಮತ್ತು ಕಾರ್ಪೊರೇಟ್ಗಳ ಜೇಬುಗಳನ್ನು ತುಂಬುತ್ತಿದೆ. ನಮ್ಮ ನೆರೆಯ ರಾಷ್ಟ್ರಗಳಾದ ಭೂತಾನ್, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತನ್ನ ನಾಗರಿಕರಿಗೆ ಕಡಿಮೆ ಬೆಲೆಗೆ ಇಂಧನವನ್ನು ಒದಗಿಸುತ್ತಿವೆ'' ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ರೈ ಅವರು, "ಮೋದಿಯಿಂದ ಏನೂ ಒಳ್ಳೆಯದಾಗುವುದಿಲ್ಲ. ಅವರು ಜನರನ್ನು ದಾರಿತಪ್ಪಿಸುತ್ತಿದ್ದಾರೆ ಮತ್ತು ಸುಳ್ಳನ್ನು ಹರಡುತ್ತಿದ್ದಾರೆ. ಚುನಾವಣೆಗೆ ಮುಂಚಿತವಾಗಿ, ಭಾರತಕ್ಕೆ ಕಪ್ಪು ಹಣವನ್ನು ತರುವುದಾಗಿ ಮೋದಿ ಜನರಿಗೆ ಭರವಸೆ ನೀಡಿದರು, ಆದರೆ ಅವರು ಏನು ಮಾಡಿದ್ದಾರೆ'' ಎಂದು ಪ್ರಶ್ನಿಸಿದರು.
''ಕಾಂಗ್ರೆಸ್ ಮುಖಂಡರಾದ ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು. ಕಾಂಗ್ರೆಸ್ ಬ್ರಿಟಿಷರ ವಿರುದ್ಧ ಹೋರಾಡಿತು. ಆದರೆ ಈಗ ಕಾಂಗ್ರೆಸ್ನ್ನು ರಾಷ್ಟ್ರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಬ್ರಿಟಿಷರನ್ನು ಬೆಂಬಲಿಸಿದ ಜನರು ತಮ್ಮನ್ನು ದೇಶಭಕ್ತರೆಂದು ಹೇಳಿಕೊಳ್ಳುತ್ತಿದ್ದಾರೆ'''ಎಂದರು.
''ಎನ್ಡಿಎಯಲ್ಲಿ ನಾಯಕತ್ವದಲ್ಲಿ ಬದಲಾವಣೆ ಇರಬೇಕು'' ಎಂದೂ ಹೇಳಿದ ರೈ ಅವರು, ''ಇಂಧನ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಿದೆ. ದೇಶದಲ್ಲಿ ಇಂತಹ ಕೆಟ್ಟ ಸರ್ಕಾರ ಈವರೆಗೂ ಬಂದಿಲ್ಲ'' ಎಂದು ಟೀಕಿಸಿದರು.
ಕಾಂಗ್ರೆಸ್ ಸೋಮವಾರ 22 ರಂದು ಭಾವಕ್ಯತೆ ಸಮಾವೇಶವನ್ನು ನಡೆಸಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಘೋಷಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.