ಸುಳ್ಯ, ಫೆ. 19 (DaijiworldNews/SM): ಬಾಲಕಿಯೊಬ್ಬಳಿಗೆ ಆಧಾರ್ ಗುರುತಿನ ಚೀಟಿ ಸಿಗಬೇಕಾದರೆ ಒಂದಲ್ಲ ಎರಡಲ್ಲ, ಬರೋಬ್ಬರಿ ಐದು ವರ್ಷ ಪರದಾಟ ನಡೆಸಿರುವ ಘಟನೆ ನಡೆದಿದೆ. ಈ ಘಟನೆ ಯಾವುದೋ ರಾಜ್ಯದಲ್ಲಿ ನಡೆದಿರುವುದಲ್ಲ. ಪ್ರಜ್ಞಾವಂತರ ಜಿಲ್ಲೆ ದ.ಕ.ದ ಸುಳ್ಯ ತಾಲೂಕಿನಲ್ಲಿ.

ಸುಳ್ಯದ ಪೆರುವಾಜೆ ಗ್ರಾಮದ ಕುಂಡಡ್ಕದ ಕೂಲಿ ಕಾರ್ಮಿಕ ವರ್ಗಕ್ಕೆ ಸೇರಿದ ಪರಿಶಿಷ್ಟ ಜಾತಿಯ ಕುಟುಂಬದ ಬಾಬು ಹಾಗೂ ಗೀತಾ ದಂಪತಿಯ ಪುತ್ರಿ ಬಾಲಕಿ ಪವಿತ್ರಾ ಕಳೆದ ಐದು ವರ್ಷದಿಂದ ಆಧಾರ್ ಕಾರ್ಡ್ ಗಾಗಿ ಪರದಾಟ ನಡೆಸಿದ್ದಾಳೆ. ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಆಧಾರ್ ಗುರುತಿನ ಚೀಟಿ ಬೇಕೆಂದು ಕಳೆದ ಐದು ವರ್ಷಗಳಿಂದ ಬಾಲಕಿ ಪೋಷಕರು ಸುತ್ತಾಡದ ಕಚೇರಿಗಳಿಲ್ಲ. ಎಷ್ಟೇ ಪ್ರಯತ್ನಿಸಿದರೂ, ಅಲೆದಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಖಾಸಗಿ, ಸರಕಾರಿ ಕೇಂದ್ರಗಳಲ್ಲಿ 13ಕ್ಕೂ ಅಧಿಕ ರಶೀದಿ ನೋಂದಾವಣೆ ಮಾಡಲಾಗಿದೆ. ಸಾಲದ್ದಕ್ಕೆ ಅಧಾರ್ ಗೆ ಅರ್ಜಿ ಸಲ್ಲಿಸಲು ಸಾವಿರಾರು ರೂಪಾಯಿ ಕೂಡ ಈ ಕುಟುಂಬ ವ್ಯಯಿಸಿದೆ. ಬಾಲಕಿ ಹೆಸರಲ್ಲಿ ಆಧಾರ್ ಕಾರ್ಡ್ ಇಲ್ಲದ ಕಾರಣದಿಂದಾಗಿ ಆಕೆ ಸ್ಕಾಲರಶಿಫ್ ನಿಂದಲೂ ಕೂಡ ವಂಚಿತಳಾಗಿದ್ದಾಳೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಸ್ಕಾಲರ್ ಶಿಫ್ ನೀಡುತ್ತದೆ. ಆದರೆ, ಆಧಾರ್ ಇಲ್ಲದ ಕಾರಣ ಆಕೆಗೆ ಸ್ಕಾಲರ್ ಶಿಪ್ ಕೂಡ ಸಿಕ್ಕಿಲ್ಲ.
ಆಧಾರ್ ಕಾರ್ಡ್ ಯಾಕೆ ಸಿಕ್ಕಿಲ್ಲ ಎಂಬುವುದಾಗಿ ಸಂಬಂಧಿಸಿದವರನ್ನು ಪ್ರಶ್ನಿಸಿದರೆ ಯಾರಿಂದಲೂ ಸಮರ್ಪಕ ಉತ್ತರ ಸಿಕ್ಕಿಲ್ಲ. ಒಬ್ಬೊಬ್ಬರು ಒಂದೊಂದು ಅಭಿಪ್ರಾಯಗಳನ್ನು ನೀಡಿ ತಮ್ಮ ಜವಾಬ್ದಾರಿಗಳಿಂದ ಜಾರಿಕೊಂಡಿದ್ದಾರೆ.
ಇದೀಗ ನಿರಂತರ ಪ್ರಯತ್ನದಿಂದಾಗಿ ಐದು ವರ್ಷದ ಬಳಿಕ ಆಧಾರ್ ಕಾರ್ಡ್ ಸಿಕ್ಕಿದಂತಾಗಿದ್ದು, ಬಾಲಕಿಯ ಕುಟುಂಬ ಕಚೇರಿ ಅಲೆದಾಡಿ ಸುಸ್ತಾಗಿದ್ದು, ಇದೀಗ ನಿಟ್ಟುಸಿರು ಬಿಟ್ಟಿದೆ.