ಉಡುಪಿ, ಫೆ.20 (DaijiworldNews/PY): ಸದಾ ಮಕ್ಕಳು ತುಂಬಿರುತ್ತಿದ್ದ ಜಿಲ್ಲಾ ಬಾಲ ಭವನ ಸ್ತಬ್ಧವಾಗಿದೆ. ಕೊರೊನಾ ಬಿಸಿ ಇದಕ್ಕೂ ತಟ್ಟಿದೆ. ಕಳೆದ ಒಂದು ವರ್ಷದಿಂದ ಈ ಬಾಲಭವನ ಯಾವುದೇ ಉಪಯೋಗಕ್ಕೆ ಬಾರದೆ ಅನಾಥವಾಗಿದೆ. 1997ರಲ್ಲಿ ಪ್ರಾರಂಭವಾಗಿ ಜಿಲ್ಲಾ ಬಾಲ ಭವನ ಬ್ರಹ್ಮಗಿರಿ-ಬನ್ನಂಜೆ ರಸ್ತೆಯಲ್ಲಿ ಹೊಂದಿಕೊಂಡಂತೆ ಸುಮಾರು 1.02 ಎಕರೆ ಪ್ರದೇಶದಲ್ಲಿ ಈ ಕಟ್ಟಡವಿದೆ. ಕೊರೊನಾದಿಂದಾಗಿ ಇನ್ನೂ ಕೂಡ ಬಾಲಭವನ ಮಕ್ಕಳಿಗೆ ಮುಕ್ತವಾಗಿಲ್ಲ.







ಬಾಲಭವನದ ಆವರಣದಲ್ಲಿ ಜೋಕಾಲಿ, ಜಾರುಬಂಡಿ, ತಿರುಗುವ ಬಂಡಿ, ಚಾರುವ ಗುಹ, ಆಟದ ಏಣಿ ಇತ್ಯಾದಿ ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗಿದೆ. ಆದರೆ ಬಳಕೆಯಿಲ್ಲದೆ ನಿರ್ವಹಣೆಯಿಲ್ಲದೆ ತುಕ್ಕು ಹಿಡಿದು ಶಿಥಿಲಾವಸ್ಥೆಯಲ್ಲಿದೆ. ಮೂರು ವರ್ಷದ ಹಿಂದೆ ಇದರ ಪಕ್ಕದಲ್ಲೇ 14 ಲಕ್ಷ. ರೂ. ಖರ್ಚು ವೆಚ್ಚದಲ್ಲಿ ರಂಗಮಂದಿರವನ್ನು ನಿರ್ಮಿಸಲಾಗಿದ್ದು, ಯಾವುದೇ ಉಪಯೋಗವಿಲ್ಲದೆ ಖಾಲಿ ಇದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಪ್ರತಿವರ್ಷ ಉಡುಪಿ ಜಿಲ್ಲಾ ಬಾಲಭವನದಲ್ಲಿ ಬೇಸಿಗೆ ಶಿಬಿರ ಕಲಾ ಶಿಬಿರ, ವಾರಾಂತ್ಯ ಚಟುವಟಿಕೆ, ಬಲಶ್ರೀ ಪ್ರಶಸ್ತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಈ ಕಟ್ಟಡದಲ್ಲಿ ಮಕ್ಕಳ ಗ್ರಂಥಾಲಯ ಹಾಗೂ ಆಡಳಿತ ಕಛೇರಿ ಕಟ್ಟಡ ಕಾಮಗಾರಿಗಳ ಅನುಷ್ಠಾನಕ್ಕಾಗಿ ಈಗಾಗಲೇ ಕೇಂದ್ರ ಬಾಲಭವನದಿಂದ 56. 75 ಲಕ್ಷ. ರೂ. ಗಳ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಂಡಿರುತ್ತದೆ. ಇದೀಗ ಮಂದಿರವು ಕೂಡ ಸಾರ್ವಜನಿಕರಿಗೆ ಮುಕ್ತವಾಗಿಲ್ಲ.
ಉಡುಪಿ ಜಿಲ್ಲಾದ್ಯಾಂತ ಬರುವ ಎಲ್ಲಾ ತಾಲ್ಲೂಕುಗಳಲ್ಲೂ ಬಾಲಭವನಗಳನ್ನು ನಿರ್ಮಿಸಲು ಜಮೀನಿನ ಅವಶ್ಯಕತೆ ಇದ್ದು ಜಿಲ್ಲಾಡಳಿತದಿಂದ ಬಾಲಭವನದ ಹೆಸರಿಗೆ ಮಂಜೂರು ಮಾಡಿದ್ದಲ್ಲಿ ಎಲ್ಲಾ ತಾಲ್ಲೂಕಿನಾದ್ಯಂತ ಬಾಲಭವನದ ಚಟುವಟಿಕೆಗಳನ್ನು ವಿಸ್ತರಣೆ ಮಾಡಲು ಅವಕಾಶವನ್ನು ಕಲ್ಪಿಸಿಕೊಡಲಾಗುವುದೆಂಬ ಮಾಹಿತಿಯನ್ನು ಈ ಪತ್ರಿಕಾ ಹೇಳಿಕೆ ಮುಖಾಂತರ ನೀಡಬಯಸುತ್ತೇನೆ. ಕೊರೊನ ಸಮಯದಲ್ಲಿ ಬಂದ 18 ಲಕ್ಷ. ರೂ ಅನುದಾನ ಬಾಕಿಯಿದೆ. ಈಗಾಗಲೇ 30 ಜಿಲ್ಲೆಯಲ್ಲಿ 18 ಸ್ವಂತ ಕಟ್ಟಡದಲ್ಲಿ ಬಾಲಭವನ ನಡೆಯುತ್ತಿದ್ದು, ಏಪ್ರಿಲ್ ನಂತರ ತೆರೆಯುವ ನಿರೀಕ್ಷೆಯಿದೆ. ಕಳೆದ ಬಾರಿ 10 ಕೋಟಿ. ರೂ ಅನುದಾನ ಬಂದಿತ್ತು. ಈಗಾಗಲೇ 17 ಕೋಟಿ. ರೂ ಪ್ರಸ್ತಾವನೆ ಸರಕಾರಕ್ಕೆ ಮಾಡಲಾಗಿದೆ. ಇನ್ನಷ್ಟು ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡುವ ಚಿಂತನೆ ಇದೆ, ಸರಕಾರದ ಆದೇಶ ನೀಡಿದ ಬಳಿಕ ಅದನ್ನು ಎಂದು ರಾಜ್ಯ ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ದಾಯ್ಜಿವಲ್ಡ್ಗೆ ಮಾಹಿತಿ ನೀಡಿದ್ದಾರೆ.
ಅದೇನೇ ಇದ್ದರು ಲಕ್ಷಾಂತರ ಖರ್ಚು ಮಾಡಿ ಕಟ್ಟಿದ ಬಾಲಭವನ ಸರಕಾರಿ ಕಟ್ಟಡ ನಿರುಪಯೋಗಿಯಾಗಿ ಉಳಿದಿದೆ ಎಂದು ಸಾರ್ವಜನಿಕರ ಅಭಿಪ್ರಾಯ.