ಪುತ್ತೂರು, ಜು14: ಕರಾವಳಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಕುಮಾರಧಾರಾ ಮತ್ತು ಗುಂಡ್ಯ ನದಿಗಳು ತುಂಬಿ ಹರಿಯುತ್ತಿದ್ದು, ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆಯ ಹೊಸ್ಮಠ ಸೇತುವೆ ಮುಳುಗಡೆಯಾಗಿದೆ.
ಮುಳುಗು ಸೇತುವೆಯೆಂದೇ ಖ್ಯಾತಿ ಪಡೆದಿರುವ ಹೊಸ್ಮಠ ಸೇತುವೆಯು ಮುಳುಗಡೆಗೊಂಡು ಆರನೇ ದಿನಕ್ಕೆ ಕಾಲಿಟ್ಟಿದೆ. ನಿರಂತರ ಮಳೆಯಿಂದಾಗಿ ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗುಂಡ್ಯ ಹೊಳೆಗೆ ಅಡ್ಡಲಾಗಿರುವ ಹೊಸ್ಮಠ ಮುಳುಗು ಸೇತುವೆ ಸಂಚಾರಕ್ಕೆ ಮುಕ್ತವಾಗಿಲ್ಲ. ಸ್ಥಳೀಯರು ಮುಳುಗು ಸೇತುವೆ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಸೇತುವೆಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದಾರೆ.
ಸೇತುವೆಯ ಮೇಲೆ ನೀರಿನ ಹರಿವು ಒಂದೇ ರೀತಿಯಲ್ಲಿದ್ದು, ನೀರಿನ ಹರಿವು ಕಡಿಮೆಯಾಗಬಹುದೆಂಬ ಆಶಾಭಾವನೆಯಲ್ಲಿ ಸೇತುವೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಕಾಯುತ್ತಿದ್ದಾರೆ.
ಸೇತುವೆಯ ಇಕ್ಕೆಲಗಳಲ್ಲಿ ರಕ್ಷಣಾ ಗೇಟು ಆಳಡಿಸಿ ಕಡಬ ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.