ಪುತ್ತೂರು, ಫೆ.20 (DaijiworldNews/MB) : ಎರಡು ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ, ಉಪ್ಪಿನಂಗಡಿ ಪೊಲೀಸರು ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಬೆಳ್ತಂಗಡಿ ತಾಲ್ಲೂಕಿನ ಪದಂಗಡಿ ನಿವಾಸಿ ಹಮೀದ್ ಅಲಿಯಾಸ್ ಕುನ್ಹಿಮೋನು (46) ಬಂಧಿತ ಆರೋಪಿ. ಬಂಟ್ವಾಳದಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಆತನ ಸಹಚರ ಫಾರೂಕ್ನನ್ನು ಬಂಧಿಸಲಾಗಿತ್ತು.

ಸುಮಾರು 15 ಪೊಲೀಸ್ ಠಾಣೆಗಳಲ್ಲಿ ದಾಖಲಾದ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಹಮೀದ್ ಆರೋಪಿಯಾಗಿದ್ದ. ಹಮೀದ್, ಫಾರೂಕ್ ಇಬ್ಬರು ಜೊತೆಗೂಡಿ ಡಿಸೆಂಬರ್ 11 ರಂದು ಉಪ್ಪಿನಂಗಡಿಯಲ್ಲಿರುವ ಮಹಾಮಾಯಿ ಎಂಟರ್ಪ್ರೈಸಸ್ ಮತ್ತು ಉಲ್ಲಾಸ್ ಬಾರ್ಗೆ ನುಗ್ಗಿ ನಗದು ಕದ್ದಿದ್ದರು. ನಂತರ ಹಮೀದ್, ನಾಟಿಬೈಲ್ನಲ್ಲಿರುವ ಅಥಿತಿ ಎಂಟರ್ಪ್ರೈಸಸ್ ಮತ್ತು ನರ್ಸರಿಗೆ ನುಗ್ಗಿ ಹಣ ದೋಚಿದ್ದ.
ಈ ಕಳ್ಳರು ತಾವು ದರೋಡೆಗೈದ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಮತ್ತು ಡಿವಿಆರ್ ಅನ್ನು ಕೂಡಾ ಕದಿಯುತ್ತಿದ್ದರು. ಅದರಲ್ಲಿ ಅವರು ಕಳ್ಳತನ ಮಾಡಿದ ಪುರಾವೆಯಿರುವ ಕಾರಣ ಅವರು ಅದನ್ನು ನದಿಗೆ ಎಸೆಯುತ್ತಿದ್ದರು.
ಕಾರ್ಯಾಚರಣೆಯ ನೇತೃತ್ವವನ್ನು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಉಮೇಶ್ ಉಪ್ಪಳಿಕೆ ಮತ್ತು ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಈರಯ್ಯ ಡಿ ಎಸ್ ವಹಿಸಿದ್ದರು.