ಕಾರ್ಕಳ, ಫೆ.20 (DaijiworldNews/PY): "ದೇಶದಲ್ಲಿಯೇ ಪೊಲೀಸರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅವರಿಗೆ ವಸತಿ ಸೌಲಭ್ಯ ಸಹಿತಿ ಅಗತ್ಯ ಸವಲತ್ತು ನೀಡಿರುವಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಪೊಲೀಸ್ ಗೃಹ 20-25 ಯೋಜನೆಗೆ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದು, ರಾಜ್ಯದಲ್ಲಿ ಈ ಯೋಜನೆಯು 5 ವರ್ಷದಲ್ಲಿ ಪೂರ್ಣಗೊಳ್ಳಲಿದ್ದು, ಆ ಮೂಖೇನ 10.400 ವಸತಿಗೃಗೃಹ ನಿರ್ಮಾಣವಾಗಲಿದೆ. ಆ ಮೂಲಕ ಶೇ.64 ರಷ್ಟು ವಸತಿಸೌಲಭ್ಯಗಳನ್ನು ಕಲ್ಪಿಸಿದಂತಾಗುತ್ತದೆ" ಎಂದು ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.



ಕಾರ್ಕಳ ಪೊಲೀಸ್ ಠಾಣಾ ಪರಿಸರದಲ್ಲಿ ನಿರ್ಮಾಣಗೊಂಡ 92.20 ಕೋ.ರೂ. ವೆಚ್ಚದ ನೂತನ ಪೊಲೀಸ್ ವಸತಿಗೃಹ ಲೋಕಾರ್ಪಣೆಗೈದು ಅವರು ಮಾತನಾಡಿದರು.
"ಕಳೆದ 10 ವರ್ಷಗಳಲ್ಲಿ ಮಾಡದಷ್ಟು ಸಾಧನೆಯನ್ನು ಪೊಲೀಸ್ ಇಲಾಖೆ ಕಳೆದ 10 ತಿಂಗಳಿನಲ್ಲಿ ಡ್ರಗ್ಸ್ ಪತ್ತೆ ಹಚ್ಚಲಾಗಿದೆ. ಸಿಂಥೆಟಿಕ್ ಡ್ರಗ್ಸ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಗರಿಷ್ಟ ಪ್ರಮಾಣದಲ್ಲಿ ಕೇಸ್ ದಾಖಲಿಸಲಾಗಿದೆ. ವಿದೇಶದಿಂದ ಡ್ರಗ್ಸ್ ರಾಜ್ಯಕ್ಕೆ ಬರುವುದು ನಿಯಂತ್ರಣಕ್ಕೆ ಬಂದಿದೆ.. ಡ್ರಗ್ಸ್ ಜಾಲದಿಂದ ಸಮಾಜದ ಸ್ವಾಸ್ಥ್ಯವನ್ನು ಕದಡುವ ಪ್ರಯತ್ನ ನಡೆಯುತ್ತಿದೆ. ಡ್ರಗ್ಸ್ ವಿರುದ್ಧ ಹೋರಾಟಕ್ಕೆ ಕಟ್ಟಿಬದ್ಧರಾಗಬೇಕು" ಎಂದರು.
"ಅಪರಾಧ ನಿಯಂತ್ರಣ, ಹತೋಟಿ, ಕಠಿಣ ಹಾಗೂ ನಿರ್ದಾಕ್ಷಿಣ್ಯ ಕ್ರಮ, ಪಾರದರ್ಶಕತೆಗೆ ಆದ್ಯತೆ ನೀಡಲಾಗುವುದು. ಇವೆಲ್ಲ ಅಂಶಗಳಿಗೆ ಡಿಜಿಪಿ ನೇತೃತ್ವದಲ್ಲಿ ವರದಿ ತಯಾರಿಸಲು ಸಮಿತಿ ರಚಿಸಲಾಗಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ, ಸಮಾಜಸ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸರ ಪಾತ್ರ ದೊಡ್ಡದು. ಅವರ ಬದುಕಿನ ಬಗ್ಗೆಯೂ ಸರಕಾರ ಗಮನ ಹರಿಸುತ್ತಿದೆ.
ರಾಜ್ಯದಲ್ಲಿ 1 ಸಾವಿರ ಪೊಲೀಸ್ ಹುದ್ದೆ ನೇಮಕಗೊಳಿಸಲಾಗಿದೆ. ಮುಂದಿನ 3 ವರ್ಷದಲ್ಲಿ 16 ಸಾವಿರ ಪೊಲೀಸರ ನೇಮಕಾತಿ ಆಗಲಿದೆ. ನೇಮಕಾತಿ ಪಾರದರ್ಶಕವಾಗಿ ನಡೆಯಲಿದೆ ಎಂದರು.
"ಎಲ್ಲ ಜಿಲ್ಲೆಗಳಲ್ಲಿ ಸೈನ್ ಸ್ಟೇಶನ್ಗೆ ಸೈಬರ್ ತಜ್ಞರ ನೇಮಕಗೊಳಿಸುವುದು, ನಾಲ್ಕು ಎಫಿಶಿಯಲ್ ಲ್ಯಾಬ್ ಹೊಸದಾಗಿ ರಚನೆ ಮಾಡಲಿದ್ದೇವೆ. ಸೈಬರ್ ನಿಯಂತ್ರಣ ಮತ್ತು ಡ್ರಗ್ಸ್ ಪತ್ತೆ ಇದರಿಂದ ಅನುಕೂಲವಾಗಲಿದೆ" ಎಂದರು.
"ಸಾಮಾಜಿಕ ಜಾಲಗಳಿಂದ ಸಮಾಜದ ಮನಸ್ಸು ಕದಡುವ ಪ್ರಯತ್ನಗಳು ಎಗ್ಗಿಲ್ಲದೇ ನಡೆಯುತ್ತಿರುವುದು ದುರಂತವಾಗಿದೆ. ಇದರಿಂದಾಗಿ ಕೋಮುಗಲಭೆ, ಸಾಮಾಜಿಕ ಅಭದ್ರತೆ, ಶೋಭೆ, ದ್ವೇಷ, ಅಪನಂಬಿಕೆ ಸ್ಥಷ್ಟಿಯಾಗುತ್ತಿದೆ. ಇದು ದೇಶ ದ್ರೋಹದ ಕೆಲಸವಾಗಿದೆ. ಇಂತಹ ಕೃತ್ಯ ಕಡಿವಾಣ ಹಾಕುವಲ್ಲಿ ಪೊಲೀಸರ ದಕ್ಷತೆ ಮುಖ್ಯವಾಗಿದೆ. ಸಮಾಜದ ಸಹಮತ ಅಗತ್ಯ" ಎಂದರು.
"ಹೆಬ್ರಿ ಪೊಲೀಸ್ ಠಾಣೆ ರಚನೆಗೆ ಸಂಬಂದಿಸಿ ಬಜೆಟ್ನಲ್ಲಿ ಸೇರಿಸಲಾಗುವುದು. ಹೆಬ್ರಿ ಅಗ್ನಿಶಾಮಕ ಠಾಣೆಗೆ ಸ್ಥಾಪನೆಗೆ ಕೆಲವೊಂದು ಮಾನದಂಡಗಳಿದ್ದು, ಹೆಬ್ರಿ ತಾಲೂಕಿಗೆ ಫಯರ್ ಸಬ್ ಸ್ಟೇಶನ್ ನೀಡುವ ಬಗ್ಗೆ ಭರವಸೆ ನೀಡಿದರು. ಪ್ರತಿಯೊಂದು ರಂಗವು ಎಲ್ಲ ರಂಗದಲ್ಲಿ ಪ್ರಗತಿ ಸಾಧಿಸಿದರೆ ಇಡೀ ಸಮುದಾಯವೇ ಪ್ರಗತಿ ಹೊಂದಲು ಸಾಧ್ಯ" ಎಂದರು.
ಶಾಸಕ ವಿ ಸುನೀಲ್ಕುಮಾರ್ ಅಧ್ಯಕ್ಷತೆ ವಹಿಸಿದ ಮಾತನಾಡಿ, "ಕಾರ್ಕಳ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಸರಕಾರದಿಂದ ಕಾರ್ಕಳದ ಕಡೆಗೆ ತರುವ ಪ್ರಯತ್ನ ನಡೆಸಿದ್ದೇನೆ. ಇನ್ನು ಹಲವು ಯೋಜನೆಗಳ ಅನುಷ್ಠಾನ ಹಂತದಲ್ಲಿದೆ" ಎಂದರು.
ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ದೇವಜ್ಯೋತಿ ಪ್ರಸ್ತಾವನೆಗೈದರು, ಉಡುಪಿ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ ಸ್ವಾಗತಿಸಿದರು. ವೃತ್ತ ನಿರೀಕ್ಷಕ ಸಂಪತ್ಕುಮಾರ್ ವಂದಿಸಿದರು. ನಿರಂಜನ ಜೈನ್ ನಿರೂಪಿಸಿದರು. ಸಂಜನ ಯು.ಜೆ ಪ್ರಾರ್ಥಿಸಿದರು.
ನೂತನ ಗೃಹ ಕೊಠಡಿಯ ಕೀ ಗಳನ್ನು ಎಎಸ್ಐ ರಾಜೇಶ್ ಬೇಕಲ್ ದಂಪತಿಗಳಿಗೆ ಹಾಗೂ ಎಎಸ್ಐ ರುಕ್ಮೀಣಿಯವರು ಪ್ರಾಯೋಗಿಕವಾಗಿ ಹಸ್ತಾಂತರಿಸಿದರು.
ಡಿವೈಎಸ್ಪಿ ಭರತ್ ರೆಡ್ಡಿ, ಗ್ರಾಮಾಂತರ ಠಾಣೆ ಎಸ್ಐ ತೇಜಸ್ವಿ ಹೆಬ್ರಿ ಠಾಣೆ ಎಸ್ಐ ಸುಮಾ, ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಅವರ ಕುಟುಂಬಸ್ಥರು, ಸರಕಾರದ ಮೂಖ್ಯ ಸಚೇತಕ ವಿ.ಸುನೀಲ್ ಕುಮಾರ್ ಕಾರ್ಕಳ, ಜಿಲ್ಲಾಧಿಕಾರಿ ಜಿ.ಜಗದೀಶ್, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ದೇವಜ್ಯೋತಿ ಉಡುಪಿ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ, ರಾಜ್ಯ ಗೇರು ನಿಗಮ ಅಧ್ಯಕ್ಷ ಮಣಿರಾಜ್ ಶೆಟ್ಟಿ, ತಾ.ಪಂ ಅಧ್ಯಕ್ಷ ಸೌಭಾಗ್ಯ ಮಡಿವಾಳ, ಜಿಲ್ಲಾಧಿಕಾರಿ ಐ ಜಗದೀಶ್, ಜಿ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ಉಪಸ್ಥಿತರಿದ್ದರು.