ಕಾರ್ಕಳ, ಫೆ.20 (DaijiworldNews/MB) : ''1898 ಆರಂಭಗೊಂಡಿದ್ದ ಕಾರ್ಕಳ ನ್ಯಾಯಾಲಯವು ಹೆಬ್ರಿ ಸೋಮೇಶ್ವರದಿಂದ ಮೂಲ್ಕಿಯ ಪಾವಂಜೆ ತನಕ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡಿತ್ತು. ಇದೇ ನ್ಯಾಯಾಲಯದಲ್ಲಿ ವೃತ್ತಿ ಆರಂಭಿಸಿದ ಅದೆಷ್ಟೋ ಮಂದಿ ಕಾಯಾಂಗ, ನ್ಯಾಯಾಂಗ, ಶಾಸಕಾಂಗ ಕ್ಷೇತ್ರಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರ ಪೈಕಿ ಕೆ.ಎಸ್.ಹೆಗ್ಡೆ, ವೀರಪ್ಪ ಮೊಯಿಲಿ ಒಳಗೊಂಡಿರುವುದು ಕಾರ್ಕಳಕ್ಕೆ ಹೆಮ್ಮೆ ಎನ್ನಿಸಿದೆ'' ಎಂದು ಸರ್ವೋಚ್ಚ ನ್ಯಾಯಾಲಯ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಹೇಳಿದರು.




ಕಾರ್ಕಳದಲ್ಲಿ ನೂತನವಾಗಿ ನಿರ್ಮಿಸಿರುವ ನ್ಯಾಯಾಲಯಗಳ ಸಂಕೀರ್ಣವನ್ನು ಲೋಕಾರ್ಪಣೆಗೈದು ಅವರು ಮಾತನಾಡಿದರು.
''ಕಾರ್ಕಳ ನ್ಯಾಯಾಲಯವು ಒಂದು ಫಾಕ್ಟರಿ ಇದ್ದಂತೆ ವಕೀಲರನ್ನು ಸಿದ್ಧಪಡಿಸಿ ಉನ್ನತ ಕೇತ್ರಗಳಿಗೆ ಕಳುಹಿಸುವಲ್ಲಿ ಮುಂಚೂಣಿಯಲ್ಲಿ ಇದೆ. 54 ಮಂದಿ ಜ್ಯೂನಿಯರ್ ಅಡ್ವಕೇಟ್ಗಳನ್ನು ಹೊಂದಿರುವ ಎಂ.ಕೆ.ವಿಜಯಕುಮಾರ್ ಅವರು ನನ್ನ ಗುರು ಕೂಡಾ ಆಗಿದ್ದು, ನೂತನ ಕಟ್ಟಡ ಉದ್ಘಾಟನೆಯ ವರ್ಷದಲ್ಲಿಯೇ ಅವರ ಪಾಲಿಗೆ ರಾಜೋತ್ಸವ ಪ್ರಶಸ್ತಿ ಲಭಿಸಿರುವುದು ಒಂದು ದಾಖಲೆ'' ಎಂದರು.
ಕಾರ್ಕಳ ನ್ಯಾಯಾಲಯವು ಹಳ್ಳಿ ಕಾಡು ಪ್ರದೇಶ ವ್ಯಾಪ್ತಿಯಲ್ಲಿ ಇದ್ದು, ಇಲ್ಲಿ ಯಾವುದೇ ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದ ಕೇಸುಗಳು ವಿರಳ. ಇಲ್ಲಿ ಏನಿದ್ದರೂ ಕ್ರಿನನಲ್ ಹಾಗೂ ಸಿವಿಲ್ ವ್ಯಾಜ್ಯಗಳೇ ಬಹುತೇಕ. ಬಡವರು ಹಾಗೂ ಹಳ್ಳಿಗರ ಈ ವ್ಯಾಜ್ಯವನ್ನು ಎದುರಿಸುತ್ತಿದ್ದು, ಕಕ್ಷಿದಾರರಿಗೆ ಕಡಿಮೆ ಖರ್ಚಿನಲ್ಲಿ ನ್ಯಾಯ ಒದಿಗಿಸುವ ನ್ಯಾಯಾವಾದಿಗಳಾಗಬೇಕು ಕರೆ ನೀಡಿದರು.
ಜನ್ಮಭೂಮಿಗೆ ಒತ್ತು..
ಜನ್ಮಭೂಮಿಯ ಬಗ್ಗೆ ಎಲ್ಲಿಲ್ಲದ ಒಲವು ನನ್ನದಾಗಿದೆ. ಮಗಳು ತವರಿಗೆ ಬಂದಷ್ಟೇ ಖುಷಿ ನೀಡುತ್ತದೆ. ಜನ್ಮ ನೀಡಿದ ಭೂಮಿ ಅವಿಭಜಿತ ಕಾರ್ಕಳವಾಗಿದ್ದರೆ, ವಕೀಲನಾಗಿ ಜನ್ಮ ನೀಡಿದ ಭೂಮಿಯೂ ಕಾರ್ಕಳ ಆಗಿದೆ ಅನ್ನುವ ಮೂಲಕ ಅವರು ತನ್ನ ಹುಟ್ಟೂರಿನ ಕುರಿತು ಕೊಂಡಾಡಿದಲ್ಲದೇ ತುಳು, ಕನ್ನಡ ಭಾಷಾ ಪ್ರೇಮ ಮೆರೆದರು.
ಗೃಹ ಸಚಿವ ಬಸವರಾಜು ಬೊಮ್ಮಾಯಿ ಮಾತನಾಡಿ, ''ಬಡವರ ಪಾಲಿಗೆ ನ್ಯಾಯ ದೊರಕಲಿರುವ ಪುಣ್ಯಕ್ಷೇತ್ರವೇ ನ್ಯಾಯಾಲಯ.ಅವಿಭಜಿತ ದಕ್ಷಿಣ ಕನ್ನಡಿಗರು ನ್ಯಾಯಪರ ಕಾನೂನು, ಆಡಳಿತ ಹಾಗೂ ತಮ್ಮ ಹಕ್ಕು ಗಳ ಬಗ್ಗೆ ಅರಿವು ಉಳ್ಳವರು ಆಗಿದ್ದಾರೆ'' ಎಂದರು.
ಕರ್ನಾಟಕ ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ್ ಅಧ್ಯಕ್ಷತೆವಹಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್, ಸರ್ವೋಚ್ಚ ನ್ಯಾಯಲಯ ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾದ ಕೆ.ಎಂ. ನಟರಾಜ್ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ವಿ.ಸುನೀಲ್ ಕುಮಾರ್ ಭಾಗವಹಿಸಲಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ರಾಜೇಂದ್ರ ಬದಾಮಿಕರ್, ಶಿವಮೊಗ್ಗ (ಸಿ.ಎಂಡ್ ಬಿ.) ಕೇಂದ್ರ ವಲಯ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರು ಕಾಂತರಾಜು ಬಿ.ಟಿ., ಕಾರ್ಕಳ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ, ಪದ್ಮಪ್ರಸಾದ್ ಜೈನ್ ಎನ್ ಉಪಸ್ಥಿತರಿದ್ದರು.
ಉಡುಪಿಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಜೆ.ಎನ್.ಸುಬ್ರಹ್ಮಣ್ಯ ಸ್ವಾಗತಿಸಿದರು. ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಘನ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸನತ್ ಕುಮಾರ್ ಜೈನ್ ಧನ್ಯವಾದ ನೀಡಿದರು.