ಉಡುಪಿ, ಫೆ.20 (DaijiworldNews/MB) : ''ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಮತ್ತು ಎರಡನೇ ಅಲೆ ಹಿನ್ನೆಲೆ ಕೇರಳ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶಗಳಲ್ಲಿ ನಿರ್ಬಂಧ ವಿಧಿಸಲಾಗುವುದು'' ಎಂದು ಫೆಬ್ರವರಿ 20 ರ ಶನಿವಾರ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ನಾವು ಕೇರಳ ಮತ್ತು ಮಹಾರಾಷ್ಟ್ರದೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದೇವೆ. ಕೆಲವು ಗಡಿಗಳಲ್ಲಿ ಪ್ರತಿದಿನ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಗಡಿ ಜಿಲ್ಲೆಗಳಲ್ಲಿ ನಿರ್ಬಂಧ ಹೇರಲು ಉನ್ನತ ಮಟ್ಟದ ಚರ್ಚೆ ನಡೆಸಲಾಗಿದೆ. ಕೇರಳ ಮತ್ತು ಕರ್ನಾಟಕದ ನಡುವೆ ಪ್ರಯಾಣಿಸಲು 16 ಮಾರ್ಗಗಳಿವೆ. ನಾವು ಪ್ರಯಾಣಿಕರಿಗೆ ಕೆಲವು ಪ್ರಮುಖ ಮಾರ್ಗಗಳಲ್ಲಿ ಸಂಚಾರಕ್ಕೆ ಮಾತ್ರ ಅವಕಾಶ ನೀಡುತ್ತೇವೆ. ಇತರ ಮಾರ್ಗಗಳನ್ನು ಮುಚ್ಚುತ್ತೇವೆ. ಕೇರಳ ಮತ್ತು ಮಹಾರಾಷ್ಟ್ರದಿಂದ ಪ್ರವೇಶಿಸುವ ಎಲ್ಲ ಜನರು ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ. ಮಹಾರಾಷ್ಟ್ರ ಮತ್ತು ಕೇರಳ ಗಡಿಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ'' ಎಂದು ತಿಳಿಸಿದರು.
ಪಂಚಮಶಾಲಿ ಸಮುದಾಯವು ರಾಜ್ಯದಲ್ಲಿ ಮೀಸಲಾತಿ ಆಂದೋಲನ ನಡೆಸುತ್ತಿರುವ ಕುರಿತು ಮಾತನಾಡಿದ ಅವರು, ''ಈ ಆಂದೋಲನದಲ್ಲಿ ಇರುವವರು ನಮ್ಮ ಸಚಿವರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಸಚಿವ ಸಿಸಿ ಪಾಟೀಲ್ ಅವರೊಂದಿಗೆ ಚರ್ಚಿಸುತ್ತಿದ್ದಾರೆ. ಈ ವಿಷಯವನ್ನು ಕ್ಯಾಬಿನೆಟ್ ಸಭೆಗಳಲ್ಲಿ ಚರ್ಚಿಸಲಾಗಿದೆ. ಎಸ್ಸಿ, ಎಸ್ಟಿ ಮತ್ತು ಒಬಿಸಿ ಮತ್ತು ಸಾಮಾನ್ಯ ವರ್ಗಕ್ಕೂ ಆಂದೋಲನ ನಡೆಯುತ್ತಿದೆ. ಕಾನೂನು ತಜ್ಞರ ಅಭಿಪ್ರಾಯ ತೆಗೆದುಕೊಳ್ಳಲಾಗುವುದು'' ಎಂದು ಹೇಳಿದರು.