ಮಂಗಳೂರು,ಜು.15: ಕಳೆದ ಒಂಬತ್ತು ವರ್ಷಗಳಿಂದ ರೈಲ್ವೆ ಇಲಾಖೆಯ ಮೂರು ಡಿವಿಷನ್ ಗಳ ಸಭೆ ನಡೆಸಲಾಗುತ್ತಿತ್ತು. ಈ ಸಭೆಗೆ ಪಾಲ್ಗಾಟ್ ಮತ್ತು ಕೊಂಕಣ್ ರೈಲ್ವೆ ಡಿವಿಷನ್ ಹಾಜರಾಗಿ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿತ್ತು. ಆದರೆ ಇದುವರೆಗೆ ಈ ಸಭೆಗೆ ಮೈಸೂರು ಡಿವಿಷನ್ ಹಾಜರಾಗಿಲ್ಲ. ಈ ಹಿನ್ನಲೆ ಅಧಿಕಾರಿಗಳು ಸಭೆಗೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅಧಿಕಾರಿಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸಭೆಯಲ್ಲೇ ತರಾಟೆಗೆತ್ತಿಕೊಂಡಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೈಸೂರು ವಿಭಾಗ ವ್ಯಾಪ್ತಿಯ ರೈಲ್ವೆ ಅಧಿಕಾರಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಧಿಕಾರಿಗಳು ಕೇವಲ ಕಾನೂನು ಮಾತನಾಡುತ್ತೀರಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಿಲ್ಲ. ನಿಮ್ಮ ಡಿವಿಷನ್ ಸಮಸ್ಯೆಗಳ ಬಗ್ಗೆ ಮತ್ತು ಅದಕ್ಕೆ ಪರಿಹಾರ ಕ್ರಮಗಳನ್ನು ತಿಳಿಸಿ ಎಂದು ಸಭೆಯಲ್ಲೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರು-ಮೈಸೂರು ರೈಲ್ವೆ ಮಾರ್ಗದ ಕುಂದುಕೊರತೆ ಪರಿಶೀಲನೆ ವೇಳೆ ಮೈಸೂರು ವಿಭಾಗೀಯ ರೈಲ್ವೆ ಅಧಿಕಾರಿಗಳು ನಕಾರಾತ್ಮಕವಾಗಿ ಉತ್ತರಿಸಿದಾಗ ಅಸಮಾಧಾನಗೊಂಡ ಸಂಸದರು, ಪ್ರತಿಯೊಂದು ಕೆಲಸಕ್ಕೆ ಕಾನೂನು ನೆಪ ಹೇಳಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಬಾರದು. ಸರಕಾರಿ ಕೆಲಸದಲ್ಲಿ ನಾವು ಜನರ ಸೇವೆ ಮಾಡಬೇಕು. ಅವರಿಗೆ ತೊಂದರೆ ನೀಡುವುದಲ್ಲ ಎಂದರು.
ಇನ್ನು ಫರಂಗಿಪೇಟೆಯಲ್ಲಿ ರೈಲ್ವೆ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ಮೀನು ಮಾರಾಟ, ಕ್ಯಾಂಟಿನ್ಗಳನ್ನು ನಡೆಸಲಾಗುತ್ತಿದೆ. ಪ್ರತಿದಿನವೂ ರೈಲ್ವೆ ಅಧಿಕಾರಿಯೊಬ್ಬರು ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಾಗರಿಕರೊಬ್ಬರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ವಿಭಾಗೀಯ ನಿಯಂತ್ರಕ ಆರ್.ಕೆ.ಸಿನ್ನಾ, ಒತ್ತುವರಿಗಳನ್ನು ತೆರವುಗೊಳಿಸಿ ಅನಧಿಕೃತ ಹಣ ವಸೂಲಿ ನಿಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು-ಹಾಸನ ಮೂಲಕ ತಿರುಪತಿಗೆ ಹೊಸ ರೈಲು ಸಂಚಾರ ಆರಂಭಿಸಬೇಕು. ತಿರುಪತಿಗೆ ಉಡುಪಿ, ಮಂಗಳೂರಿನಿಂದ ನಿತ್ಯ 8-10 ಟೂರಿಸ್ಟ್ ಬಸ್ಗಳು ಸಂಚರಿಸುತ್ತವೆ. ರೈಲು ಸಂಚಾರ ಸಾಧ್ಯವಾದರೆ ಜನತೆಗೆ ಅನುಕೂಲವಾಗಲಿದೆ ಎಂದು ಜನರ ಪರವಾಗಿ ಧ್ವನಿ ಎತ್ತಿದ್ರು.