ಕಾಸರಗೋಡು,ಜು.15: ರೈಲಿನಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ೨೨ ಕಿಲೋ ಪಾನ್ ಮಸಾಲ ಉತ್ಪನ್ನಗಳನ್ನು ರೈಲ್ವೆ ಪೊಲೀಸರು ಕಾಸರಗೋಡಿನಲ್ಲಿ ವಶಪಡಿಸಿಕೊಂಡಿದ್ದಾರೆ.
ಹೊರರಾಜ್ಯದಿಂದ ಕೇರಳಕ್ಕೆ ರೈಲು ಮೂಲಕ ಪಾನ್ ಮಸಾಲ ಉತ್ಪನ್ನಗಳನ್ನು ಸಾಗಿಸಲಾಗುತ್ತಿದ್ದು , ರೈಲು ನಿಲುಗಡೆಗೊಳ್ಳಲು ನಿಧಾನಗತಿಯಲ್ಲಿ ಸಂಚರಿಸುವಾಗ ಪೊದೆಗೆ ಪಾನ್ ಮಸಾಲ ಹೊಂದಿರುವ ಚೀಲವನ್ನು ಎಸೆಯಲಾಗುತ್ತಿತ್ತು, ಅಲ್ಲಿಂದ ಕೊಂಡೊಯ್ಯಲು ವ್ಯವಸ್ಥೆ ಮಾಡಲಾಗುತ್ತಿತ್ತು. ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಸೀಟಿ ನಡಿಯಲ್ಲಿ ಬಚ್ಚಿಡಲಾಗಿದ್ದ ೨೨ ಕಿಲೋ ಪಾನ್ ಮಸಾಲ ವಶಪಡಿಸಿಕೊಂಡಿದ್ದಾರೆ. ಹೀಗೆ ಅಕ್ರಮವಾಗಿ ರೈಲುಗಳಲ್ಲಿ ಪಾನ್ ಮಸಾಲ ಉತ್ಪನ್ನಗಳನ್ನು ಕೇರಳಕ್ಕೆ ಸಾಗಾಟ ಮಾಡುವ ಜಾಲವೇ ಕಾರ್ಯಾಚರಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.