ಉಚ್ಚಿಲ, ಫೆ.21 (DaijiworldNews/PY): ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ ಇದರ ಸಮಗ್ರ ಜೀರ್ಣೋದ್ಧಾರ ಪ್ರಯುಕ್ತ ನೂತನ ಗರ್ಭಗುಡಿಯ ಶಿಲಾನ್ಯಾಸ ಸಮಾರಂಭ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಇಂದು ಆದಿತ್ಯವಾರ ನಡೆಯಿತು.








ಅದಮಾರು ಮಠದ ಸ್ವಾಮೀಜಿಗಳಾದ ಶ್ರಿ ವಿಶ್ವಪ್ರಿಯ ತೀರ್ಥರು ಬೆಳಗ್ಗೆ ನೂತನ ಗರ್ಭಗುಡಿಯ ಶಿಲಾನ್ಯಾಸ ನಡೆಸಿಕೊಟ್ಟರು.
ನಂತರ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, "ಎರಡು ವರ್ಷದೊಳಗೆ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಮುಗಿದು ಬ್ರಹ್ಮಕಲಶೋತ್ಸವ ನಡೆದು, ಒಂದು ಶ್ರದ್ಧಾ ಕೇಂದ್ರವಾಗಿ ಬೆಳೆಯಲಿ. 2022ಕ್ಕೆ ರಾಮ ಮಂದಿರ ನಿರ್ಮಾಣ ಕೆಲಸ ಪೂರ್ಣವಾಗುತ್ತಿದ್ದಂತೆ, ಲಕ್ಷ್ಮೀ ದೇವಸ್ಥಾನ ಉಡುಪಿಯಲ್ಲಿ ಆಗಲಿ" ಎಂದು ಹಾರೈಸಿದರು.
"ಹಿಂದು ಸಮಾಜಕ್ಕೆ ಅನ್ಯಾಯ ಅಥವಾ ಅಪಮನವಾದಾಗ ಹೊರಾಟ ಮಾಡಿ ಹಿಂದು ಸಮಾಜದ ರಕ್ಷಣೆ ಮತ್ತು ಗೌರವವನ್ನು ಎತ್ತಿ ಹಿಡಿದ ಒಂದು ಸಮಾಜ ಅದು ಮೊಗವೀರ ಸಮುದಾಯ. ಹೋರಾಟದ ಮಧ್ಯೆ ಇರುವ ಸಮುದಾಯ. ಆರ್ಎಸ್ಎಸ್ನ ಪ್ರಚಾರಕನಾಗಿದ್ದಾಗ ಮನೆಯ ಮಗನಂತೆ ಮೊಗವೀರ ಸಂಘದವರು ನನ್ನನ್ನು ಕಂಡರು. ಇದು ಕೇವಲ ಸಮುದಾಯಕ್ಕೆ ಮೀಸಲಾದ ಕೇಂದ್ರ ಅಲ್ಲ. ಇಡೀ ಹಿಂದು ಸಮಾಜದ ಶ್ರದ್ದಾ ಕೇಂದ್ರವಾಗಲಿ. ಸಂಸ್ಕಾರ ಪೂರಿತ ಕೇಂದ್ರ ಆಗಲಿ. ಅವಿಭಜಿತ ದ.ಕ ಜಿಲ್ಲೆಯ ಪ್ರವಾಸಿ ಕೇಂದ್ರ ಆಗಲಿ. ಬೇರೆ ಬೇರೆ ಜಾತಿ ಪಂಥಗಳು ಲಕ್ಷ್ಮೀ ಪಾದದಡಿಯಲ್ಲಿ ಒಂದಾಗಲಿ" ಎಂದು ಹಾರೈಸಿದರು
ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಗೌರವಾದ್ಯಕ್ಷ ನಾಡೋಜ ಜಿ ಶಂಕರ್, ಮುಜರಾಯಿ ಸಚಿವಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಜೆ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ವಿನಯ್ ಕುಮಾರ್ ಸೊರಕೆ, ಬಾರ್ಕೂರು ಬೆಣ್ಣೆಕುದ್ರುವಿನ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಆನಂದ ಸಿ ಕುಂದರ್ ಕೋಟ, ರಾಜ್ಯ ಗಂಗಾಮತಸ್ಥರ ಸಂಘದ ಅಧ್ಯಕ್ಷ ಮೌಲಾಲಿ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಹರಿಯಪ್ಪ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.