ಕಾಸರಗೋಡು, ಫೆ. 21 (DaijiworldNews/SM): ದ.ಕ. ಜಿಲ್ಲಾಡಳಿತ ರಾಜ್ಯ ಸರಕಾರದ ಆದೇಶದಂತೆ ಕೇರಳ-ಕರ್ನಾಟಕ ಸಂಪರ್ಕಿಸುವ ಐದು ಗಡಿಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಗಡಿಗಳನ್ನು ಬಂದ್ ಮಾಡಿದ್ದು, ಇದರಿಂದಾಗಿ ಗಡಿ ಭಾಗದ ಜನ ಸಂಕಷ್ಟಕ್ಕಿಡಾಗಿದ್ದಾರೆ. ಈ ಹಿನ್ನೆಲೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಗಡಿ ಬಂದ್ ಆದೇಶವನ್ನು ಹಿಂಪಡೆಯಬೇಕೆಂದು ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ, ದ.ಕ. ಜಿಲ್ಲೆಯ ಮಂಗಳೂರು ಉತ್ತರ ಹಾಗೂ ದಕ್ಷಿಣ ಶಾಸಕರ ಟ್ವೀಟ್ಟರ್ ಖಾತೆಗೆ ಟ್ಯಾಗ್ ಮಾಡಿಕೊಂಡು ಶ್ರೀಕಾಂತ್ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಗಡಿಗಳನ್ನು ತೆರವುಗೊಳಿಸಿ ಮತ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಕಾಸರಗೋಡಿನ ಬಹುತೇಕ ಜನತೆ ದ.ಕ. ಜಿಲ್ಲೆಯ ಬೇರೆ ಬೇರೆ ನಗರ ಪಟ್ಟಣಗಳೊಂದಿಗೆ ವ್ಯವಹಾರ, ಶಿಕ್ಷಣ, ಉದ್ಯೋಗ ಹೀಗೆ ಹಲವು ರೀತಿಯಲ್ಲಿ ಅವಲಂಬಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗಡಿಗಳನ್ನು ಬಂದ್ ಮಾಡಿರುವುದರಿಂದ ಸಂಕಷ್ಟಕ್ಕೀಡಾಗಿದ್ದು, ತಕ್ಷಣ ಬಂದ್ ಆದೇಶ ಹಿಂಪಡೆಯಿರಿ ಎಂದು ಮನವಿ ಮಾಡಿದ್ದಾರೆ.