ಉಡುಪಿ, ಸೆ 28 : ಪ್ರತಿಭಟನೆ ಅಂದರೆ ಉಡುಪಿಯಲ್ಲಿ ಥಟ್ಟನೆ ನೆನಪಾಗುವುದು ಕ್ಲಾಕ್ ಟವರ್. ಆದರೆ ಈಗ ಇದರ ಜತೆಯಲ್ಲಿ ಜಟ್ಕಾ ಸ್ಟಾಂಡ್ ಹಾಗು ಸಿಟಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸದಂತೆ ಅಪರ ಜಿಲ್ಲಾಧಿಕಾರಿ ಅನುರಾಧ ಆದೇಶ ನೀಡಿದ್ದು, ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರತಿಧ್ವನಿಸಿದೆ. ಅಪರ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ಧ್ವನಿ ಎತ್ತಿದ ನಗರಸಭಾ ಸದಸ್ಯರು ನಗರಸಭೆಯ ನಿರ್ಣಯ ಪಡೆದುಕೊಳ್ಳದೆ ಏಕಾಏಕಿ ನಿರ್ದಾರ ಕೈಗೊಂಡದ್ದಕ್ಕೆ ಆಕ್ರೋಶ ವ್ಯಕ್ತಪಿಡಿಸಿದ್ದಾರೆ. ಇನ್ನು ಉಡುಪಿ ನಗರದಲ್ಲಿ ಪ್ರತಿಭಟನೆ ನಡೆಸಲು ಪರ್ಯಾಯ ಜಾಗ ಗುರುತಿಸಿ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ನಿರ್ಣಯ ಮನವಿ ಸಲ್ಲಿಸುವಂತೆ ಆಗ್ರಹಿಸಿದ್ದಾರೆ.
ನಗರದ ಸರ್ವಿಸ್ ಬಸ್ ನಿಲ್ದಾಣ, ಜಟ್ಕಾ ಸ್ಟಾಂಡ್ ಹಾಗೂ ಕ್ಲಾಕ್ ಟವರ್ ಪ್ರದೇಶದಲ್ಲಿ ಪ್ರತಿಭಟನೆ ನಿಷೇಧಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ಗುರುವಾರ ನಡೆದ ಉಡುಪಿ ನಗರಸಭೆ ಸಾಮಾನ್ಯಸಭೆಯಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಮೂರು ಪ್ರದೇಶ ಹೊರತು ಪಡಿಸಿ ನಗರದಲ್ಲಿ ಬೇರೆ ಪ್ರದೇಶವನ್ನು ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಯಶ್ಪಾಲ್ ಸುವರ್ಣ, ಜಿಲ್ಲಾಡಳಿತ ನಗರದಲ್ಲಿ ಪ್ರತಿಭಟನೆ ನಡೆಸುವುದನ್ನು ನಿಷೇಧಿಸುವ ಮೊದಲು ನಗರಸಭೆ ಗಮನಕ್ಕೆ ತಂದಿಲ್ಲ. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಅದನ್ನು ಕಸಿದುಕೊಳ್ಳುವುದು ಸರಿಯಲ್ಲ. ಈ ಮೂರು ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ತೊಂದರೆಯಾಗುವುದಾದರೆ ಬೇರೆ ಸ್ಥಳವನ್ನು ಗುರುತಿಸಲಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಡಿ.ಮಂಜುನಾಥಯ್ಯ, ಪ್ರತಿಭಟನೆಗೆ ಅವಕಾಶ ನೀಡದಂತೆ ನಾವು ಯಾವುದೇ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿಲ್ಲ. ಅವರು ಪೊಲೀಸ್ ಇಲಾಖೆಯ ವರದಿಯಂತೆ ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು. ಈ ವಿಚಾರದಲ್ಲಿ ಪರ ವಿರೋಧ ಚರ್ಚೆಗಳು ನಡೆದವು.
ಆಡಳಿತ ಪಕ್ಷದ ಜನಾರ್ದನ್ ಭಂಡಾರ್ಕರ್ ವಿರೋದ ಪಕ್ಷಗಳ ಮಾತಿಗೆ ಸಹಮತ ವ್ಯಕ್ತ ಪಡಿಸಿ ಮಾತನಾಡಿದ್ರು, ನಗರದ ಪ್ರಮುಖ ಸ್ಥಳಗಳಲ್ಲಿ ಜನರ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆಯೇ ಹೊರತು ಶೋಕಿಗಾಗಿ ಅಲ್ಲ. ಹಾಗಾಗಿ ಈ ನಿಷೇಧ ಕ್ರಮ ಖಂಡನೀಯ. ಪ್ರತಿಭಟನೆಗೆ ದಿನದಲ್ಲಿ ಸಮಯ ನಿಗದಿಪಡಿಸಿ, ಅನಿಧಿಷ್ಟಾವಧಿ ಧರಣಿಗಳನ್ನು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ನಡೆಸಲಿ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಈಗ ನಿಷೇಧಿಸಿರುವ ಸ್ಥಳವನ್ನು ಬಿಟ್ಟು ಬೇರೆ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದರು.