ಕುಂದಾಪುರ, ಫೆ.22 (DaijiworldNews/MB) : "ವಿದೇಶಿಯರ ವಿರುದ್ಧ ಭಾರತದ ಮೊಟ್ಟಮೊದಲ 'ಸರ್ಜಿಕಲ್ ಸ್ಟ್ರೈಕ್' ಪೋರ್ಚುಗೀಸ್ ಮತ್ತು ಡಚ್ನ ನೆಲೆಯಾದ ಬಸ್ರೂರಿನಲ್ಲಿ ನಡೆಯಿತು. ಅದನ್ನು ಚತ್ರಪತಿ ಶಿವಾಜಿ ನಡೆಸಿದರು. ಅದೇ ದಿನ ಶಿವಾಜಿ ಕನ್ನಡ ಭೂಮಿಯಲ್ಲಿ ಹಿಂದೂ ಸಾಮ್ರಾಜ್ಯವನ್ನು ನಿರ್ಮಿಸುವ ಪಣತೊಟ್ಟರು. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಶಿವಾಜಿಯನ್ನು ಒಂದು ನಿರ್ದಿಷ್ಟ ಜಾತಿ ಅಥವಾ ಭಾಷೆಗೆ ಸೀಮಿತಗೊಳಿಸುವುದು ಸರಿಯಲ್ಲ" ಎಂದು ಯುವ ಬ್ರಿಗೇಡ್ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.















ಫೆಬ್ರವರಿ 21 ರ ರವಿವಾರ ಬಸ್ರೂರಿನಲ್ಲಿ 16 ನೇ ಶತಮಾನದಲ್ಲಿ ಬಸ್ರೂರಿಗೆ ಬಂದು ಬಸ್ರೂರನ್ನು ಪೋರ್ಚುಗೀಸ್ ಹಿಡಿತದಿಂದ ಮುಕ್ತಗೊಳಿಸಿದ ಶಿವಾಜಿ ಮಹಾರಾಜ್ ಅವರ ನೆನಪಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸೂಲಿಬೆಲೆ ಮಾತನಾಡಿದರು.
"ದೇಶವು ನಿಜವಾಗಿಯೂ ಶತಮಾನಗಳ ಹಿಂದೆ ಶಿವಾಜಿ ಹಾಕಿದ ಹಾದಿಯಲ್ಲಿ ಸಾಗುತ್ತಿದೆ. ನಮ್ಮ ದೇಶವು ಎಲ್ಲಾ ವಿದೇಶಿ ದೇಶಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ. ಶಿವಾಜಿಯ ಸಾಹಸ ಮತ್ತು ಧೈರ್ಯವೇ ಇದರ ಹಿಂದಿನ ಸ್ಫೂರ್ತಿ. ಶಿವಾಜಿ ಹಾಗೂ ಕೆಳದಿ ಚೆನ್ನಮ್ಮ ಹೆಸರಿನಲ್ಲಿ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸುವ ಉದ್ದೇಶ ನಾನು ಹೊಂದಿದ್ದೇನೆ'' ಎಂದು ಹೇಳಿದರು.
"ಶಿವಾಜಿ ಅವರು ಮರಾಠಿ ಎಂಬ ಕಾರಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ನೀವು ರೈತರ ಪ್ರತಿಭಟನೆಗೆ ಕರೆ ನೀಡಿದ ವಿದೇಶಿಯರನ್ನು ನೀವು ಬೆಂಬಲಿಸುತ್ತೀರಿ. ಅವರು ಕನ್ನಡಿಗರೇ?" ಎಂದು ಸೂಲಿಬೆಲೆ ಪ್ರಶ್ನಿಸಿದರು.
"ಹಿಂದೂ ಸಾಮ್ರಾಜ್ಯವನ್ನು ನಿರ್ಮಿಸಲು ಶಿವಾಜಿಯ ಹೋರಾಟ, ತ್ಯಾಗ, ಕಠಿಣ ಪರಿಶ್ರಮ ಮತ್ತು ಸಮರ್ಪಣೆ ನಮ್ಮೆಲ್ಲರಿಗೂ ಮಾದರಿ. ಹಿಂದೂ ಸಮಾಜದ ಬಗ್ಗೆ ಕೀಳಾಗಿ ಮಾತನಾಡುವ ಯಾರ ವಿರುದ್ಧವೂ ಒಗ್ಗಟ್ಟಾಗಿ ನಿಲ್ಲಲು ಶಿವಾಜಿ ನಮ್ಮ ಪ್ರೇರಣೆಯಾಗಿರಬೇಕು. ಶಿವಾಜಿ ಹಿಂದೂ ಸಾಮ್ರಾಜ್ಯದ ಹಿಂದಿನ ಶಕ್ತಿ. ಹಿಂದೂಗಳಲ್ಲಿ ಜಾಗೃತಿ ಮೂಡಿಸಿದವರು'' ಎಂದು ಹಡಗಳಿ ಹಳ ಸಂಸ್ಥಾನದ ಹಳವೀರಪ್ಪ ಸ್ವಾಮೀಜಿ ಹೇಳಿದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಟ್ರಸ್ಟಿ ಬಿ ಅಪ್ಪಣ್ಣ ಹೆಗ್ಡೆ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಈ ವೇಳೆ ಬೃಹತ್ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿತ್ತು. ರ್ಯಾಲಿಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಭಾಗವಹಿಸಿದ್ದರು. ಕಾರವಾರ, ಶಿವಮೊಗ್ಗ ಮತ್ತು ಮೈಸೂರುಗಳಿಂದ ಬೈಕ್ಗಳಲ್ಲಿ ಯುವಕರು ಆಗಮಿಸಿ ಸಮಾವೇಶಕ್ಕೆ ಸೇರಿದರು. 5,000 ಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು.
ಯುವ ಬ್ರಿಗೇಡ್ ದಕ್ಷಿಣ ಪ್ರಾಂತ್ಯದ ಸಂಚಾಲಕ ಚಂದ್ರಶೇಖರ್ ನಂಜನಗೂಡು ಪ್ರಾಸ್ತಾವಿಕ ಭಾಷಣ ಮಾಡಿದರು. ವರ್ಧಮಾನ್ ತ್ಯಾಗಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಬಿಜೆಪಿ ಕಾರ್ಯದರ್ಶಿ ಸತೀಶ್ ಕುಮಾರ್ ಅವರು ನಿರ್ವಹಿಸಿದರು.