ಮೂಡುಬಿದಿರೆ, ಫೆ.22 (DaijiworldNews/PY): "ನಾನು ಮತ್ತು ಅಭಯಚಂದ್ರ ಜೈನ್ ಅವರು ಕೋಟಿ- ಚೆನ್ನಯರಾಗಿ ಕೆಲಸ ಮಾಡುತ್ತೇವೆ" ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.

ಮೂಡುಬಿದಿರೆ ಕಂಬಳದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಈ ಹಿಂದೆ ಅಭಯಚಂದ್ರ ಜೈನ್ ಅವರು ಕಂಬಳವನ್ನು 10-15 ವರ್ಷ ಚೆನ್ನಾಗಿ ನಡೆಸಿಕೊಡುತ್ತಿದ್ದಿರಿ. ಅಭಯಚಂದ್ರ ಜೈನ್ ಹಾಗೂ ಭಾಸ್ಕರ್ ಕೋಟ್ಯಾನ್ ಅವರ ಶ್ರಮದಿಂದ ಮೂಡುಬಿದಿರೆ ಕ್ಷೇತ್ರದಲ್ಲಿ ಕಂಬಳ ಆರಂಭವಾಗಿದೆ. 10 ಎಕರೆ ಜಾಗವನ್ನು ಕಂಬಳ ಸಮಿತಿಗೆ ನೀಡಿದ್ದಾರೆ ಅವರಿಗೆ ನನ್ನ ಅಭಿನಂದನೆಗಳು. ನಾವೆಲ್ಲರೂ ಜೊತೆಯಾಗಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳೋಣ. ನಾನು ಮತ್ತು ಅಭಯಚಂದ್ರ ಅವರು ಕೋಟಿ ಚೆನ್ನಯರಾಗಿ ಕೆಲಸ ಮಾಡುತ್ತೇವೆ. ರಾಜಕೀಯ ಏನಿದ್ದರೂ ಎಲೆಕ್ಷನ್ ಸಮಯದಲ್ಲಿ ಮಾತ್ರ ಉಳಿದ ಸಮಯ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡುವ" ಎಂದರು.
ಬಳಿಕ ಮಾತನಾಡಿದ ಅಭಯಚಂದ್ರ ಜೈನ್, "ಬೇರೆ ಬೇರೆ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸಲಾಗದೇ ಟೆಂಪೋದಲ್ಲಿ ಜನರನ್ನು ಕರೆದುಕೊಂಡು ಬರಬೇಕಾಗುತ್ತದೆ. ಆದರೆ, ಈ ಕಂಬಳಕ್ಕೆ ಅವರಾಗಿಯೇ ಬರುವ ಜನ ಸಮೂಹ ಇದು ತುಳುನಾಡಿನ ಒಂದು ವೈಶಿಷ್ಟ್ಯ. ಉಮನಾಥ್ ಕೋಟ್ಯಾನ್ ಅವರು ಬಹಳ ಒಳ್ಳೆಯ ರೀತಿಯಲ್ಲಿ ಕಂಬಳಕ್ಕೆ ಪೋತ್ಸಾಹ ನೀಡುತ್ತಾ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೂಡುಬಿದಿರೆಯ ಕಂಬಳ ಇಡೀ ದೇಶದಲ್ಲಿ ಯಶಸ್ವಿ ಕಂಬಳ ಎಂಬುದನ್ನು ನಾವು ತೋರಿಸಿಕೊಡುವಂತಾಗಲಿ" ಎಂದು ತಿಳಿಸಿದರು.
"ಕಂಬಳ ನಿಲ್ಲುವಂತ ಸಂದರ್ಭದಲ್ಲಿ ಕೂಡಾ ಮೂಡುಬಿದಿರೆಯಲ್ಲಿ ಒಂದು ದೊಡ್ಡ ಹೋರಾಟವನ್ನು ಮಾಡಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಕಂಬಳ ನಡೆಯಲೇಬೇಕು, ಇದು ಜಾನಪದ ಕ್ರೀಡೆ ಎಂದು ತೋರಿಸಿಕೊಡುವಂತ ಕೆಲಸ ಮೂಡುಬಿದಿರೆಯ ಜನತೆ, ಕೋಟಿ-ಚೆನ್ನಯ ಕಂಬಳ ಸಮಿತಿ ಮಾಡಿ ತೋರಿಸಿದೆ" ಎಂದು ಹೇಳಿದರು.