ಮಂಗಳೂರು, ಜು 16: ಅಗ್ಗ ದರದಲ್ಲಿ ಅಹಾರ ಪೂರೈಕೆ ಮಾಡುವ ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ 50 ಕೋ.ರೂಪಾಯಿ ಅವ್ಯವಹಾರ ನಡೆದಿದೆ ಎಂಬ ವಿರೋಧ ಪಕ್ಷದ ಅರೋಪವನ್ನು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ತಳ್ಳಿಹಾಕಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ "ಅವರು ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಅವರು ಸುಳ್ಳು ಅರೋಪ ಮಾಡಿದ್ದಾರೆ. ಇದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು ಜನರಲ್ಲಿ ತಪ್ಪು ಸಂದೇಶವನ್ನು ರವಾನಿಸುವ ಉದ್ದೇಶವನ್ನೊಳಗೊಂಡಿದೆ. ಇಂದಿರಾ ಕ್ಯಾಂಟೀನ್ ಬಗ್ಗೆ ಶಾಸಕರಿಗಿರುವ ಮಾಹಿತಿ ಕೊರತೆಯು ಅವರ ಅಪಾದನೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸರಿಯಾದ ಮಾಹಿತಿ ಪಡೆಯದೆ ಜನಪರ ಕಾರ್ಯಕ್ರಮಗಳ ಬಗ್ಗೆ ಸುಳ್ಳು ಅರೋಪಗಳನ್ನು ಮಾಡುವುದು ಸರಿಯಲ್ಲ. ಇದರ ಬದಲು ಜನ ಸಾಮಾನ್ಯರಿಗೆ ವರದಾನದಂತಿರುವ ಇಂತಹ ಯೋಜನೆಗಳನ್ನು ಪ್ರೋತ್ಸಾಹಿಸಿ ಶಾಸಕರು ತಮ್ಮ ಸಾಮಾಜಿಕ ಜೀವನದ ಘನತೆಯನ್ನು ಹೆಚ್ಚಿಸಬೇಕು" ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ಬಗ್ಗೆ ವಿವರಗಳನ್ನು ನೀಡುತ್ತಾ ಅವರು "ರಾಜ್ಯಾದ್ಯಂತ 263 ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪಿಸುವ ಉದ್ದೇಶದೊಂದಿಗೆ ಆರಂಭಿಸಲಾದ ಈ ಯೋಜನೆಯು ಯಶಸ್ವಿಯ ಹಂತದಲ್ಲಿದೆ. ಈಗಾಗಲೇ 136 ಕ್ಯಾಂಟೀನ್ ಗಳ ನಿರ್ಮಾಣ ಕಾಮಗಾರಿ ಪೂರ್ತಿಯಾಗಿದ್ದು 37 ನಿರ್ಮಾಣದ ಕೊನೆಯ ಹಂತದಲ್ಲಿವೆ. ದ.ಕ. ಜಿಲ್ಲೆಗೆ ಒಟ್ಟು 6 ಕ್ಯಾಂಟೀನ್ ಗಳು ಮಂಜೂರಾಗಿದ್ದು ಈ ಪೈಕಿ ಕೆಲವು ಈಗಾಗಲೇ ಕಾರ್ಯಾಚರಿಸುತ್ತಿವೆ. ನಗರದ ಪಂಪ್ ವೆಲ್ ನಲ್ಲಿ ಮಂಜೂರಾದ ಇಂದಿರಾ ಕ್ಯಾಂಟೀನ್ ಜುಲೈ 17 ರಂದು ಉದ್ಘಾಟನೆಗೊಳ್ಳಲಿದೆ" ಎಂದು ಅವರು ತಿಳಿಸಿದರು.