ಮಂಗಳೂರು, ಫೆ.22 (DaijiworldNews/PY): "ಎಸ್ಡಿಪಿಐ ಹಾಗೂ ಪಿಎಫ್ಐ ಬಿಜೆಪಿಯ ಬಿ ಟೀಂ ಆಗಿದ್ದು, ಆ ಟೀಂ ಅನ್ನು ನಿಷೇಧಿಸಲಿ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.


ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ಎಸ್ಡಿಪಿಐ ಹಾಗೂ ಪಿಎಫ್ಐ ಬಿಜೆಪಿಯ ಬಿ ಟೀಂ ಆಗಿದ್ದು, ಬಿಜೆಪಿಯವರು ಪಿಎಫ್ಐಗೆ ರ್ಯಾಲಿ ಮಾಡಲು ಒಪ್ಪಿಗೆ ನೀಡಿದ್ದಾರೆ. ಮೊದಲು ಅವರು ಪಿಎಫ್ಐ ಹಾಗೂ ಎಸ್ಡಿಪಿಐ ಅನ್ನು ರದ್ದು ಮಾಡಲಿ. ರದ್ದುಪಡಿಸಲು ಸಾಕಷ್ಟು ಸಾಕ್ಷ್ಯಗಳಿವೆ. ಆ ಸಾಕ್ಷ್ಯಗಳನೆಲ್ಲಾ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ರದ್ದು ಮಾಡಲಿ. ಬಿಜೆಪಿ ಎಸ್ಡಿಪಿಐ ಅನ್ನು ಬೆಳೆಸುತ್ತಿದೆ. ಬಿಜೆಪಿಗೆ ಎಸ್ಡಿಪಿಐ ಹಾಗೂ ಪಿಎಫ್ಐ ಅನ್ನು ನಿಷೇಧಿಸಲು ಏನಾದರು ತೊಂದರೆಯೇ?" ಎಂದು ಕೇಳಿದರು.
ಪುದುಚೇರಿಯ ವಿ. ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರಕಾರವು ಪತನಗೊಂಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಚುನಾವಣೆಯ ವೇಳೆ ನಾರಾಯಣಸ್ವಾಮಿ ಅವರು ಸಿಎಂ ಆಗಿ ಇರಬಾರದು. ಅಲ್ಲದೇ, ಚುನಾವಣೆಯು ಅವರ ಅಧಿಕಾರಾವಧಿಯಲ್ಲಿ ನಡೆಯಬಾರದು ಎಂದು ಸರ್ಕಾರ ತೆಗೆದುಹಾಕುತ್ತಿದ್ದಾರೆ. ಇದು ಅಸಂವಿಧಾನಿಕ. ಶಾಸಕರನ್ನು ಖರೀದಿ ಮಾಡಿ ರಾಜೀನಾಮೆ ಕೊಡಿಸುತ್ತಿದ್ದಾರೆ" ಎಂದು ಆರೋಪಿಸಿದರು.