ಉಡುಪಿ, ಜು 16: ವಿವಾಹಿತೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆಂಬ ಆರೋಪದಡಿಯಲ್ಲಿ ಬಂಧಿಸಲ್ಪಟ್ಟ ಕರವೇ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಪಂಜಿಮಾರ್ ಗೆ ಉಡುಪಿ ಸೆಷನ್ಸ್ ನ್ಯಾಯಾಲಯ ಜುಲೈ 28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ನ್ಯಾಯಾಲಯದ ಅದೇಶದ ಮೇರೆಗೆ ಅರೋಪಿಯನ್ನು ಮಂಗಳೂರು ಜೈಲಿಗೆ ಕರೆತರಲಾಗಿದೆ.
ನಗರದಲ್ಲಿ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದ ವಿವಾಹಿತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎಂಬ ಕಾರಣಕ್ಕೆ ಪಂಜಿಮಾರ್ ನಿವಾಸಿಯಾದ ಸಂತೋಷ್ ಶೆಟ್ಟಿಯನ್ನು ಜುಲೈ ೧೫ರಂದು ಬಂಧಿಸಲಾಗಿತ್ತು. ಮಹಿಳೆ ಒಬ್ಬಂಟಿಯಾಗಿದ್ದ ಸಂದರ್ಭದಲ್ಲಿ ಫ್ಯಾನ್ಸಿ ಸ್ಟೋರಿಗೆ ಆಗಮಿಸಿ ಮಹಿಳೆಯ ದೇಹ ಸ್ಪರ್ಶಿಸಲು ಪ್ರಯತ್ನಿಸಿದ್ದ ಹಾಗೂ ಬಲವಂತವಾಗಿ ಆಕೆಯನ್ನು ನಗರದ ಲಾಡ್ಜೊಂದಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದ ಎಂಬ ದೂರಿನ ಮೇರೆಗೆ ಅರೋಪಿಯನ್ನು ಬಂಧಿಸಲಾಗಿತ್ತು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಕಾರ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ದೂರಿನ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದ್ದರು. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.