ಪುತ್ತೂರು, ಫೆ.22 (DaijiworldNews/MB) : ಪುತ್ತೂರು ತೆಂಕಿಲದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಫೆ.20ರಂದು ನಡೆದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಲ್ಯಾಪ್ಟಾಪ್ನಲ್ಲಿ ಬಟನ್ ಒತ್ತುವ ಮೂಲಕ `ಪುತ್ತೂರು ಸುದ್ದಿ ಚಾನೆಲ್' ಅನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರವರು ಲೋಕಾರ್ಪಣೆಗೊಳಿಸಿದರು.




ಬಳಿಕ ಮಾತನಾಡಿದ ಅವರು, ''ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾದುದು. ಮಾಧ್ಯಮ ಮಾಹಿತಿ ಆಧಾರಿತವಾಗಿರಬೇಕೇ ಹೊರತು ಮಾಧ್ಯಮಗಳಿಂದಲೇ ಮಾಹಿತಿ ಸೃಷ್ಟಿಸುವ ಕೆಲಸ ಆಗಬಾರದು. ಬ್ರೇಕಿಂಗ್ ನ್ಯೂಸ್, ಪೈಯ್ಡ್ ನ್ಯೂಸ್ ಹೊರತುಪಡಿಸಿ ವಸ್ತುನಿಷ್ಠ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರಗೊಳ್ಳಬೇಕು. ಸಮಾಜ ಸುಧಾರಣೆಗೆ ಸುದ್ದಿ ಚಾನೆಲ್ ಮಾದರಿಯಾಗಬೇಕು'' ಎಂದರು.
ಸಭಾ ಕಾರ್ಯಕ್ರಮದ ಆರಂಭದಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ರವರು ವಿಡಿಯೋ ಸಂದೇಶದ ಮೂಲಕ ಶುಭ ಹಾರೈಸಿದರು. ಲೋಕಲ್ ವೋಕಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಾಶಂಸನೆಗೈದರು. ಸುದ್ದಿ ವರ್ಷದ ಪ್ರಶಸ್ತಿ ಪುರಸ್ಕೃತರನ್ನು ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ಶಾಸಕ ಯು.ಟಿ.ಖಾದರ್ ಅವರು ಸನ್ಮಾನಿಸಿ ಮಾತನಾಡಿ ಚಾನೆಲ್ಗೆ ಶುಭ ಹಾರೈಸಿದರು. ಬಳಿಕ ಉಪನ್ಯಾಸ ಕಾರ್ಯಕ್ರಮಗಳು ನಡೆಸಲಾಯಿತು. ಸುಳ್ಯ ಸುದ್ದಿ ಚಾನೆಲ್ ಹಾಗೂ ವೆಬ್ಸೈಟ್ ವಿಭಾಗದ ಮುಖ್ಯಸ್ಥ ದುರ್ಗಾಕುಮಾರ್ ನಾಯಕ್ ಸ್ವಾಗತಿಸಿ, ಪುತ್ತೂರು ಸುದ್ದಿ ಬಿಡುಗಡೆಯ ಮುಖ್ಯ ವರದಿಗಾರ ಸಂತೋಷ್ಕುಮಾರ್ ಶಾಂತಿನಗರರವರು ವಂದಿಸಿದರು. ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಚಾನೆಲ್ ಕಛೇರಿಯನ್ನು ಮಧ್ಯಾಹ್ನ ದೇವಣ್ಣ ಕಿಣಿ ಕಟ್ಟಡದಲ್ಲಿರುವ ಸುದ್ದಿ ಮೀಡಿಯಾ ಸೆಂಟರ್ನಲ್ಲಿ ಸಚಿವ ಎಸ್.ಅಂಗಾರ ಉದ್ಘಾಟಿಸಿದರು.