ಮಂಗಳೂರು, ಫೆ. 22 (DaijiworldNews/SM): ದ.ಕ. ಜಿಲ್ಲೆಗೆ ಪ್ರವೇಶ ಮಾಡುವ ಪ್ರಮುಖ ಐದು ಗಡಿಗಳನ್ನು ಹೊರತು ಪಡಿಸಿ ಇತರೆ ಗಡಿಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಮುಂದಿನ ಎರಡು ಅಥವಾ ಮೂರು ದಿನಗಳ ಕಾಲ ವಿದ್ಯಾರ್ಥಿಗಳು ಐಡಿ ಕಾರ್ಡ್ ಗಳನ್ನು ತೋರಿಸಿ ಸಂಚರಿಸಬಹುದೆಂದು ದ.ಕ. ಜಿಲ್ಲಾ ಜಿಲ್ಲಾಧಿಕಾರಿ ಡಾ. ರಾಜೇಂದ್ರ ದೈಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ದೈಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ, ನಾಳೆ ಐಡಿ ಕಾರ್ಡ್ ಇದ್ದರೆ ಸಂಚರಿಸಬಹುದು, ಒಂದೆರಡು ದಿನದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 2-3 ದಿನಗಳ ಕಾಲ ಉದ್ಯೋಗ ಅಥವಾ ವಿದ್ಯಾರ್ಥಿಗಳು ಐಡಿ ಕಾರ್ಡ್ ತೋರಿಸಿದ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಕೇವಲ 2-3 ದಿವಸ ಮಾತ್ರ ಗಡಿಯಲ್ಲಿ ಸಂಚರಿಸಲು ಈ ರೀತಿಯ ಅವಕಾಶ ನೀಡಲಾಗಿದೆ. 2-3 ದಿನಗಳ ಬಳಿಕ ಗಡಿಯಲ್ಲಿ ಕೊರೊನಾ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದಿದ್ದಾರೆ.
ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆ ರಾಜ್ಯ ಸರಕಾರದ ನಿರ್ದೇಶನದಂತೆ ಗಡಿಭಾಗದಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಈಗಾಗಲೇ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದ್ದೇವೆ. ಗಡಿನಾಡ ಜನರ ಮೇಲಿನ ದ್ವೇಷದಿಂದ ಈ ಕ್ರಮ ಕೈಗೊಂಡಿಲ್ಲ. ಜಿಲ್ಲೆಯ ಜನತೆಯ ಸುರಕ್ಷತೆಯ ದೃಷ್ಟಿಯಿಂದ ಕ್ರಮ ಕೈಗೊಂಡಿದ್ದೇವೆ. ಹಾಗಾಗಿ ಜನರೂ ಅನವಶ್ಯಕವಾಗಿ ಗಡಿ ಭಾಗದಲ್ಲಿ ಸಂಚರಿಸಬೇಡಿ. ಅವಶ್ಯಕತೆ ಇದ್ದಲ್ಲಿ ಮಾತ್ರ ಗಡಿ ಮಾರ್ಗದಲ್ಲಿ ಸಂಚಾರ ನಡೆಸಿ ಎಂದಿರುವ ಅವರು, ಗಡಿ ಭಾಗದ ಜನತೆ ಬಹಳಷ್ಟು ಮಂದಿ ದ. ಕ. ಜಿಲ್ಲೆಯನ್ನು ಅವಲಂಬಿಸಿದ್ದಾರೆ ಎಂದರು.
ಇನ್ನು ಸರಕಾರದ ನಿರ್ದೇಶನದಂತೆ ಕೊರೊನಾ ಟೆಸ್ಟ್ ಕಡ್ಡಾಯಗೊಳಿಸಿದ್ದೇವೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ದಿನನಿತ್ಯ ಸಂಚರಿಸುವವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. 2-3 ದಿನಗಳ ಕಾಲ ಉದ್ಯೋಗ ಅಥವಾ ವಿದ್ಯಾರ್ಥಿಯ ಐಡಿ ಕಾರ್ಡ್ ಇದ್ದರೆ ಅವಕಾಶ ಮಾಡಿಕೊಡಲಾಗುವುದು. ಆದರೆ, ಆದಷ್ಟು ಶೀಘ್ರವಾಗಿ ಕೊರೊನಾ ಪರೀಕ್ಷೆ ಕಡ್ಡಾಯ ಮಾಡಿಸಿಕೊಳ್ಳಬೇಕಾಗುತ್ತದೆ. ಯಾವುದೇ ಸಮಯದಲ್ಲೂ ಕೊರೊನಾ ಪರೀಕ್ಷೆ ಕಡ್ಡಾಯ ಆದೇಶ ಬರಬಹುದು. ಗಡಿ ಪ್ರದೇಶದಲ್ಲಿ ತುರ್ತು ವಾಹನ, ಗೂಡ್ಸ್ ವಾಹನಗಳಿಗೆ ಅವಕಾಶ ನೀಡುತ್ತೇವೆ ಎಂಬುವುದಾಗಿ ದೈಜಿವರ್ಲ್ಡ್ ಜೊತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾಹಿತಿ ಹಂಚಿಕೊಂಡಿದ್ದಾರೆ.