ವಿಟ್ಲ, ಜು 16: ವಿಟ್ಲ ಭಾಗದಲ್ಲಿ ಭಾರೀ ಬಿರುಗಾಳಿಯ ಹೊಡೆತಕ್ಕೆ ಹಲವೆಡೆ ಅಪಾರ ಹಾನಿ ಸಂಭವಿಸಿದೆ. ಹಲವೆಡೆ ತೆಂಗು ಸಹಿತ ಅಡಿಕೆ ಮರಗಳು ಧರಾಶಾಹಿಯಾಗಿವೆ. ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಅಬೂಬಕ್ಕರ್ ಹಾಜಿ ಅವರ ತೋಟದಲ್ಲಿದ್ದ ಸುಮಾರು 200ಕ್ಕಿಂತಲೂ ಅಧಿಕ ಅಡಿಕೆ ಮರಗಳು ನೆಲಕ್ಕೆ ಉರುಳಿ ಅಪಾರ ಹಾನಿ ಸಂಭವಿಸಿದೆ.
ಇಂದು ಬೆಳಿಗ್ಗೆ ಮಳೆಯ ಜತೆಗೆ ಬೀಸಿದ ಭಾರೀ ಗಾಳಿಯಿಂದ ಈ ಭಾಗದ ಬಹುತೇಕ ತೋಟಗಳಲ್ಲಿ ತೆಂಗು, ಅಡಿಕೆ ಮರಗಳಿಗೆ ಹಾನಿಯಾಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ವಿಟ್ಲ ಪರಿಸರದಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುತ್ತಿದ್ದು, ನಿರಂತರ ವಿದ್ಯುತ್ ಕಡಿತಗೊಳ್ಳುತ್ತಿದೆ. ವಿದ್ಯುತ್ ತಂತಿಗಳು ಹಾದು ಹೋಗುವ ಭಾಗದಲ್ಲಿ ಬೃಹತ್ ಮರಗಳಿದ್ದು ಅವುಗಳು ಗಾಳಿ ಬೀಸುವ ಸಂದರ್ಭ ತಂತಿ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಈ ಬಗ್ಗೆ ಸ್ಥಳೀಯರು ಮೆಸ್ಕಾಂ ಇಲಾಖೆಗೆ ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದಾಗಿ ಸ್ಥಳೀಯರು ದೂರುತ್ತಿದ್ದಾರೆ. ಇನ್ನು ನಿಯಮಿತ ಸಂಖ್ಯೆಯಲ್ಲಿರುವ ಲೈನ್ ಮೆನ್ ಗಳ ಕೊರತೆಯಿದ್ದು, ಇದರಿಂದ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ.