ಕಾಸರಗೋಡು, ಫೆ.23 (DaijiworldNews/MB) : ಕೇರಳದಲ್ಲಿ ಸೋಂಕು ಅಧಿಕವಾಗುತ್ತಿರುವ ಹಿನ್ನೆಲೆ ಕೇರಳದಿಂದ ಕರ್ನಾಟಕ ಗಡಿಗಳಲ್ಲಿ ನಿರ್ಬಂಧ ಹೇರಿ ಕೊರೊನಾ ನೆಗೆಟಿವ್ ವರದಿ ಇದ್ದರೆ ಮಾತ್ರ ಕರ್ನಾಟಕ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಮೂರು ದಿನಗಳ ಕಾಲ ವಿನಾಯಿತಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೋಮವಾರ ದೈಜಿವರ್ಲ್ಡ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ತಲಪಾಡಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಗಡಿನಾಡ ಕನ್ನಡಿಗರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

ಕೇರಳದಿಂದ ದ.ಕ ಜಿಲ್ಲೆಗೆ ಆಗಮಿಸುವವರು 72 ಗಂಟೆಗಳ ಒಳಗಾಗಿ ಮಾಡಿಸಿರುವ ಕೊರೊನಾ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯಗೊಳಿಸಿ ಆದೇಶಿಸಲಾಗಿತ್ತು. ಆದರೆ ಧಿಡೀರ್ ನಿರ್ಧಾರದಿಂದ ಜನರಿಗೆ ತೊಂದರೆ ಉಂಟಾಗುವ ಹಿನ್ನಲೆಯಲ್ಲಿ ಗಡಿಯಲ್ಲಿ ಮೂರು ದಿನಗಳ ಕಾಲ ಕಟ್ಟುನಿಟ್ಟಿನ ತಪಾಸಣೆಗೆ ವಿನಾಯಿತಿ ನೀಡಲಾಗಿದೆ.
ಇನ್ನು ಕೇರಳದಿಂದ ಆಗಮಿಸುವವರಿಗೆ ದ.ಕ ಜಿಲ್ಲಾಡಳಿತದಿಂದ ಗಡಿಯಲ್ಲಿಯೇ ರಾಪಿಡ್ ಟೆಸ್ಟ್ ಮಾಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲೇ ಟೆಸ್ಟ್ ಮಾಡಿಸಲು ಸೂಚನೆ ನೀಡಲಾಗಿದೆ.
ಎಲ್ಲರೂ ಕೊರೊನಾ ಪರೀಕ್ಷೆ ನಡೆಸಿ ವರದಿ ಹೊಂದಲು ಅನುಕೂಲವಾಗಲೆಂದು ಮೂರು ದಿನಗಳ ವಿನಾಯಿತಿ ನೀಡಲಾಗಿದೆ. ಈ ಹಿನ್ನೆಲೆ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ ಕೈ ಬಿಟ್ಟಿದ್ದಾರೆ.
ಹಾಗೆಯೇ ಮೂರು ದಿನಗಳ ಬಳಿಕ ಮತ್ತೆ ತಪಾಸಣೆ ಆರಂಭಿಸಿದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಕೇರಳ ಸಂಪರ್ಕವನ್ನೇ ಬಂದ್ ಮಾಡುವ ಎಚ್ಚರಿಕೆಯನ್ನೂ ಪ್ರತಿಭಟನಾಕಾರರು ನೀಡಿದ್ದಾರೆ.