ಮಂಗಳೂರು, ಫೆ.23 (DaijiworldNews/MB) : 6 ರಿಂದ 8 ನೇ ತರಗತಿ ಪುನರಾರಂಭದ ದಿನ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಂದ ಉತ್ಸಾಹಭರಿತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇರಳ ರಾಜ್ಯದ ಗಡಿಯಲ್ಲಿರುವ ಶಾಲೆಗಳನ್ನು ಹೊರತುಪಡಿಸಿ, ಇತರ ಶಾಲೆಗಳಲ್ಲಿ ಉತ್ತಮ ಹಾಜರಾತಿ ಕಂಡು ಬಂದಿದೆ. ಕೇರಳದ ಗಡಿ ಹೊಂದಿರುವ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯದ ಶೇ. 25 ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಗಣನೀಯವಾಗಿ ಕಡಿಮೆಯಾಗಿದೆ.

ಗಡಿ ಪ್ರದೇಶದ ಶಾಲೆಗಳಲ್ಲಿ, ಎಂಟನೇ ತರಗತಿಯ ವಿದ್ಯಾರ್ಥಿಗಳು ಇಡೀ ದಿನ ತರಗತಿಗಳಿಗೆ ಹಾಜರಾಗಿದ್ದರೆ, ಆರನೇ ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮವನ್ನು ಮುಂದುವರಿಸಲಾಯಿತು. ಜಿಲ್ಲೆಯ ಇತರ ಶಾಲೆಗಳಲ್ಲಿ, ಇದುವರೆಗೆ ವಿದ್ಯಾಗಮಕ್ಕೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗಿದ್ದರು.
ಗಡಿ ಪ್ರದೇಶದ ಶಾಲೆಗಳು
ಕೇರಳದ ಗಡಿ ಪ್ರದೇಶದಿಂದ ಒಂದು ಎರಡು ಕಿಲೋಮೀಟರ್ ಒಳಗೆ ವಾಸಿಸುವ ವಿದ್ಯಾರ್ಥಿಗಳು ಕರ್ನಾಟಕ ಶಾಲೆಗಳಿಗೆ ಹಾಜರಾಗುವುದರಿಂದ, ಹೆಚ್ಚಿನ ಸಮಸ್ಯೆ ಉಂಟಾಗಲಿಲ್ಲ. ಆದರೂ ಗಡಿಯಲ್ಲಿ ಸುರಕ್ಷಾ ಕ್ರಮ ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಹಾಜರಾಗಲು ಅನುಮತಿಸುವ ಮೊದಲು ಪರೀಕ್ಷಿಸಲಾಯಿತು. ಈ ವಿದ್ಯಾರ್ಥಿಗಳು ವಿದ್ಯಾಗಮಕ್ಕೆ ಇದುವರೆಗೆ ಹಾಜರಾಗಿದ್ದರಿಂದ ಯಾವುದೇ ಗೊಂದಲ ಇರಲಿಲ್ಲ. ಜಿಲ್ಲಾಡಳಿತ ಸೂಚನೆ ನೀಡಿದರೆ ಆರನೇ ಮತ್ತು ಏಳನೇ ತರಗತಿಗಳಿಗೆ ನಿಯಮಿತ ತರಗತಿಗಳನ್ನು ನಡೆಸಲು ಸಿದ್ಧ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ
6 ರಿಂದ 8 ನೇ ತರಗತಿಯ 15,717 ವಿದ್ಯಾರ್ಥಿಗಳಲ್ಲಿ, 11,683 ವಿದ್ಯಾರ್ಥಿಗಳು ಸೋಮವಾರ ತರಗತಿಗೆ ಹಾಜರಾಗಿದ್ದು ಶೇ. 86 ರಷ್ಟು ಹಾಜರಾತಿ ಕಂಡು ಬಂದಿತು. ಹಾಜರಾತಿಗೆ ಸಂಬಂಧಿಸಿದಂತೆ ಜಿಲ್ಲೆಯು ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದೆ. ತರಗತಿಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರೋಗ ಹರಡುವಿಕೆಯ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ ಎನ್ ಎಚ್ ನಾಗೂರು ಹೇಳಿದರು.
ಕೇರಳ ಗಡಿಯ ಸಮೀಪವಿರುವ 50 ಶಾಲೆಗಳಲ್ಲಿ ನಿಯಮಿತ ತರಗತಿಗಳು ನಡೆಯುವುದಿಲ್ಲ. ಈ ಶಾಲೆಗಳಲ್ಲಿ ವಿದ್ಯಾಗಮ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ. ನಿಯಮಿತ ತರಗತಿಗಳನ್ನು ಪ್ರಾರಂಭಿಸಲು ಪೋಷಕರು ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳು ಒತ್ತಾಯಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರು ತಿಳಿಸಿದ್ದಾರೆ. ಹಾಗೆಯೇ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ. 75 ರಷ್ಟಿದ್ದು, ಇದು ರಾಜ್ಯದಲ್ಲಿ ಅತಿ ಹೆಚ್ಚು ಎಂದು ಹೇಳಿದರು.