ಮಂಗಳೂರು, ಫೆ.23 (DaijiworldNews/PY): ಎಟಿಎಂನಲ್ಲಿ ಸ್ಕಿಮ್ಮಿಂಗ್ ಉಪಕರಣಗಳನ್ನು ಅಳವಡಿಸಿ ಹಣ ಲಪಟಾಯಿಸಲು ಯತ್ನಿಸುತ್ತಿದ್ದ ಸಂದರ್ಭ ಇಬ್ಬರು ವ್ಯಕ್ತಿಗಳನ್ನು ಸ್ಥಳೀಯರು ಹಿಡಿದು ಪೊಲೀಸ್ ವಶಕ್ಕೆ ನೀಡಿರುವ ಘಟನೆ ಫೆ.21ರ ರವಿವಾರ ಮಂಗಳಾದೇವಿಯಲ್ಲಿ ನಡೆದಿದೆ.

ಇಬ್ಬರು ವ್ಯಕ್ತಿಗಳು ಎಟಿಎಂನಲ್ಲಿ ಸ್ಕಿಮ್ಮಿಂಗ್ ಉಪಕರಣಗಳನ್ನು ಇಡುತ್ತಿರುವ ಬಗ್ಗೆ ಅನುಮಾನಗೊಂಡ ಸ್ಥಳೀಯರು ಅವರನ್ನು ಓಡಿಸಿ ಸೆರೆ ಹಿಡಿದಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೈಜಿವಲ್ಡ್ ಜೊತೆ ಮಾತನಾಡಿದ ಡಿಸಿಪಿ ಹರಿರಾಮ್ ಅವರು, "ಎಟಿಎಂ ಸ್ಕಿಮ್ಮಿಂಗ್ ತಂಡದಲ್ಲಿ 5 ರಿಂದ 6 ಜನರಿದ್ದಾರೆ. ಮಂಗಳಾದೇವಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯ ಪ್ರಕಾರ, ಅವರು ಕನಿಷ್ಠ 40 ಎಟಿಎಂ ಸ್ಕಿಮ್ಮಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ತನಿಖೆ ಪ್ರಾಥಮಿಕ ಹಂತದಲ್ಲಿದೆ" ಎಂದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳು ಹೆಚ್ಚುತ್ತಿವೆ. ಈ ರೀತಿಯಾದ ಉಪಕರಣಗಳ ಮೂಲಕ ಹ್ಯಾಕರ್ಗಳು ಎಟಿಎಂ ಅನ್ನು ಹ್ಯಾಕ್ ಮಾಡುತ್ತಾರೆ. ಈ ಉಪಕರಣದಿಂದ ಎಟಿಎಂ ಕಾರ್ಡ್ನ ವಿವರಗಳನ್ನು ಪಡೆಯುತ್ತಾರೆ. ಅದರಲ್ಲಿರುವ ಮಾಹಿತಿಯನ್ನು ಕದ್ದು, ನಕಲಿ ಕಾರ್ಡ್ಗಳನ್ನು ಮಾಡಿ ಬಳಿಕ ಎಟಿಎಂ ಮೂಲಕ ಹಣ ಪಡೆಯುತ್ತಾರೆ. ಈ ವಿಧಾನವನ್ನು ಸ್ಕಿಮ್ಮಿಂಗ್ ಎಂದು ಕರೆಯಲಾಗುತ್ತದೆ.