ಮಂಗಳೂರು, ಫೆ.23 (DaijiworldNews/MB) : ಕೊರೊನಾ ಸಾಂಕ್ರಾಮಿಕದಿಂದಾಗಿ ಉಂಟಾದ ಆರ್ಥಿಕ ಹೊಡೆತದಿಂದಾಗಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಹೋಟೆಲ್ ಉದ್ಯಮಕ್ಕೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳ ಏರಿಕೆಯಿಂದಾಗಿ ಮತ್ತೆ ಸಂಕಷ್ಟ ಉಂಟಾಗಿದೆ. ಬೆಲೆ ಏರಿಕೆಯ ಏಟಿಗೆ ಈಗ ಮತ್ತೆ ಹೊಟೇಲ್ ಉದ್ಯಮ ತತ್ತರಿಸಿದ್ದು ಖಾದ್ಯಗಳ ಬೆಲೆ ಹೆಚ್ಚಿಸಲೂ ಕೂಡಾ ಸಾಧ್ಯವಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಬೆಲೆ ಏರಿಕೆಯ ವೆಚ್ಚವನ್ನು ಸರಿದೂಗಿಸಬೇಕಾದರೆ, ಅವರು ಖಾದ್ಯಗಳ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯವೆನ್ನುತ್ತಾರೆ ಹೊಟೇಲ್ ಉದ್ಯಮಿಗಳು. ಆದರೂ ಖಾದ್ಯಗಳ ಬೆಲೆ ಏರಿಕೆಯಿಂದ ತಮ್ಮ ಗ್ರಾಹಕರನ್ನು ಕಳೆದುಕೊಳ್ಳುವ ಆತಂಕವೂ ಹೊಟೇಲ್ ಉದ್ಯಮಿಗಳಿಗಿದೆ.
ಕೊರೊನಾ ಲಾಕ್ಡೌನ್ ಬಳಿಕ, ಕೆಲವು ಹೊಟೇಲ್ಗಳು ಕೆಲವು ಖಾದ್ಯಗಳ ಬೆಲೆಯನ್ನು ಹೆಚ್ಚಿಸಿದೆ. ಇನ್ನೂ ಕೆಲವರು ಜನವರಿ 1 ರಿಂದ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಪ್ರತಿ ಖಾದ್ಯಕ್ಕೆ ಸರಾಸರಿ ಒಂದರಿಂದ ನಾಲ್ಕು ರೂಪಾಯಿಗಳವರೆಗೆ ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯಿಂದಾಗಿ, ಕೆಲವು ಹೋಟೆಲ್ಗಳು ತಮ್ಮ ವ್ಯವಹಾರವನ್ನು ಕಳೆದುಕೊಂಡು ಮುಚ್ಚಿವೆ ಎಂದು ಕೆಲವು ಹೋಟೆಲ್ ಮಾಲೀಕರು ಹೇಳುತ್ತಾರೆ.
ಕೆಲವು ಹೋಟೆಲ್ಗಳಲ್ಲಿ ಶೇ. 75 ರಷ್ಟು ಗ್ರಾಹಕರು ಮಾತ್ರ ಇರುತ್ತಾರೆ. ಉಳಿದ ಆಸನಗಳು ಗ್ರಾಹಕರಿಲ್ಲದೇ ಖಾಲಿಯಾಗಿರುತ್ತದೆ. ಈ ಸಂದರ್ಭಗಳಲ್ಲಿ, ಬೆಲೆ ಏರಿಕೆಯನ್ನೂ ಮಾಡಿದರೆ ಪ್ರಸ್ತುತ ಇರುವ ಗ್ರಾಹಕರು ಕೂಡಾ ಬರಲಾರರು ಎಂಬುದು ಹೊಟೇಲ್ ಉದ್ಯಮಿಗಳನ್ನು ಆತಂಕಕ್ಕೆ ದೂಡಿದೆ. ಆದರೆ ಹೇಗಾದರೂ ಪರಿಸ್ಥಿತಿಯನ್ನು ನಿಭಾಯಿಸಲು ಹೊಟೇಲ್ ಉದ್ಯಮಿಗಳು ಸೆಣಸಾಡುತ್ತಿದ್ದಾರೆ.
ವಸ್ತುಗಳ ಬೆಲೆ ಹೆಚ್ಚಾಗುತ್ತಿದ್ದರೂ ಸಸ್ಯಾಹಾರಿ ಹೋಟೆಲ್ಗಳು ಹೇಗಾದರೂ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಉಡುಪಿಯ ಹೋಟೆಲ್ ಉದ್ಯಮಿಯೊಬ್ಬರು ಹೇಳುತ್ತಾರೆ. ಆದರೆ ಅಡುಗೆ ಎಣ್ಣೆ, ಅಡುಗೆ ಅನಿಲ, ಮೀನು, ತೆಂಗಿನ ಎಣ್ಣೆ ಇತ್ಯಾದಿಗಳ ಬೆಲೆ ಏರಿಕೆಯಾಗಿರುವ ಕಾರಣ ಮಂಗಳೂರಿನಲ್ಲಿ ಮಾಂಸಾಹಾರಿ ಹೋಟೆಲ್ ನಡೆಸುತ್ತಿರುವವರಿಗೆ ತೊಂದರೆ ಉಂಟಾಗಿದೆ ಎನ್ನುತ್ತಾರೆ ಮಂಗಳೂರಿನ ಹೊಟೇಲ್ ಉದ್ಯಮಿಯೊಬ್ಬರು. ಕೊರೊನಾದಿಂದಾಗಿ ಕಂಗೆಟ್ಟಿದ್ದ ಜನರು ಮತ್ತು ವ್ಯವಹಾರಗಳು ಕೊಂಚ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ಈಗ ದರ ಏರಿಕೆಯು ಮತ್ತೆ ಬಿಕ್ಕಟ್ಟಿಗೆ ಸಿಲುಕಿಸಿದೆ ಎನ್ನುತ್ತಾರೆ ನಗರವಾಸಿಗಳು.